ಹೊಸನಗರ : ಸರ್ಕಾರವೇ ರಚಿಸಿದ ಶ್ರೀನಿವಾಸಾಚಾರಿ ಸಮಿತಿ ವರದಿ ಅನುಷ್ಠಾನ ಹಾಗೂ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಹೊಸನಗರ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವುದರ ಮೂಲಕ ಹೊರಗುತ್ತಿಗೆದಾರರು ಸಾಂಕೇತಿಕವಾಗಿ ಮುಷ್ಕರಕ್ಕೆ ಕರೆ ನೀಡಿದ ಘಟನೆ ಇಂದಿನಿಂದ ನಡೆಯುತ್ತಿದೆ.
2019 -20, 2020-21ರ ಸಮಯದಲ್ಲಿ ಕೋವೀಡ್-19 ವಿರುದ್ಧ ಹೋರಾಟಕ್ಕಾಗಿ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ನಿಯೋಜನೆ ಮಾಡಿಸಿಕೊಂಡ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯದಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 30 ಸಾವಿರಕ್ಕೂ ಅಧಿಕ ಗುತ್ತಿಗೆ ಮತ್ತು ಹೊರಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ವರ್ಗಾವಣೆ, ಆರೋಗ್ಯ ಮತ್ತು ಜೀವ ವಿಮೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸುವುದಲ್ಲದೇ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧಾರಣೆ ಮಾಡುವುದರ ಮೂಲಕ ಮುಷ್ಕರಕ್ಕೆ ಇಳಿಯುವ ಎಲ್ಲಾ ಮುನ್ಸೂಚನೆಯನ್ನು ತೋರ್ಪಡೆಗೊಳಿಸುವಲ್ಲಿ ಅನೇಕರು ಮುಂದಾಗಿದ್ದಾರೆ.
ಈ ಸಾಂಕೇತಿಕ ಮುಷ್ಕರಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಸಂಘದ ಗೌರವಾಧ್ಯಕ್ಷರಾದ ಸೌಮ್ಯ ಹೆಬ್ಬಾರ್, ಅಧ್ಯಕ್ಷರಾದ ಪ್ರಶಾಂತ್.ಟಿ.ಕೆ, ಉಪಾಧ್ಯಕ್ಷರಾದ ಚಂದ್ರಪ್ಪ, ಕಾರ್ಯದರ್ಶಿ ಲಿಖಿತ್ ರಾಜ್, ಸಂಚಾಲಕರಾದ ಮಾಲಿನಿ, ಖಜಾಂಚಿ ಡಾ!ಫ್ರಭು ಸ್ವಾಮಿ ಸೇರಿದಂತೆ ಅನೇಕರಿದ್ದರು.
ವರದಿ :- ಪುಷ್ಪಾ ಜಾಧವ್ ಹೊಸನಗರ