ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಪ್ರಕರಣದ ಮಹತ್ವ ಹಾಗೂ ಸೂಕ್ಷ್ಮತೆ ಪರಿಗಣಿಸಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲು ಅವಕಾಶ ನೀಡಲು ಮಧ್ಯಂತರ ಆದೇಶಕ್ಕೆ ಅರ್ಜಿದಾರರು ಕೋರಿದ್ದರು. ಇದನ್ನು ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ಸೂಕ್ಷ್ಮವಾದ ಕಾರಣ ವಿಸ್ತೃತ ಪೀಠದಲ್ಲಿಯೇ ವಿಚಾರಣೆ ನಡೆಯಬೇಕು.
ಇದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣದ ದಾಖಲೆ ಹಾಗೂ ಕಡತಗಳನ್ನು ಶೀಘ್ರವೇ ವರ್ಗಾಯಿಸಿ ಎಂದು ರಿಜಿಸ್ಟ್ರಿಗೆ ಸೂಚಿಸಿತು. ವಿಸ್ತೃತ ಪೀಠ ರಚನೆ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ತೀರ್ಮಾನಿಸಲಿ ಎಂದರು.
ಈ ಪ್ರಕರಣ ಸಂಬಂಧ ನಿನ್ನೆ 4 ಗಂಟೆಗೂ ಅಧಿಕ ಸಮಯ ಹೈಕೋರ್ಟ್ ವಾದ ಆಲಿಸಿತ್ತು. ಇಂದು ಅರ್ಜಿ ವಿಚಾರಣೆ ವೇಳೆ ಪ್ರಕರಣದ ಸೂಕ್ಷ್ಮತೆ ಗಮನಿಸಿ ವಿಸ್ತೃತ ಪೀಠಕ್ಕೆ ವಹಿಸುವ ಬಗ್ಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಅರ್ಜಿದಾರರು ಮತ್ತು ಪ್ರತಿವಾದಿಗಳ ಅಭಿಪ್ರಾಯ ಕೇಳಿದರು. ಇದಕ್ಕೆ ಎರಡೂ ಕಡೆಯಿಂದಲೂ ಸಮ್ಮತಿ ಸಿಕ್ಕಿದೆ.
ಸರ್ಕಾರದ ವಾದಕ್ಕೆ ಧ್ವನಿಗೂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಯಾವುದೇ ಕಾರಣಕ್ಕೂ ಮಧ್ಯಂತರ ಆದೇಶ ನೀಡಬಾರದು. ಸಮವಸ್ತ್ರದ ಬಗ್ಗೆ ನಿಯಮ ರೂಪಿಸಲಾಗಿದೆ. ಪ್ರತಿ ವರ್ಷವೂ ಕಾಲೇಜಿನಲ್ಲಿ ಸಮವಸ್ತ್ರ ಇರುತ್ತದೆ. ಪ್ರತಿಯೊಬ್ಬರೊಂದಿಗೂ ಚರ್ಚಿಸಿಯೇ ಸಮವಸ್ತ್ರ ರೂಪಿಸಲಾಗಿದೆ. ಇಷ್ಟು ದಿನ ಆ ಸಮವಸ್ತ್ರವನ್ನು ಅರ್ಜಿದಾರರೂ ಧರಿಸಿದ್ದಾರೆ. ಈಗ ಏಕಾಏಕಿ ತಕರಾರು ತೆಗೆದಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಆದೇಶ ನೀಡಬಾರದು ಎಂದರು.
ಸರ್ಕಾರ ಅರ್ಜಿದಾರರ ಹಕ್ಕುಗಳನ್ನು ನಿಯಂತ್ರಿಸುವಂಥ ಆದೇಶ ಹೊರಡಿಸಿಲ್ಲ ಎನ್ನುತ್ತಿದೆ. ಹಾಗಿದ್ದರೆ ಅರ್ಜಿದಾರರಿಗೆ ಕಾಲೇಜುಗಳಿಗೆ ತೆರಳಲು ಯಾವುದೇ ನಿರ್ಬಂಧ ವಿಧಿಸಬಾರದು ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೇಳಿದರು. ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸುವರೆಗೆ ಮಧ್ಯಂತರ ಆದೇಶ ನೀಡಿ. ಕಾಲೇಜಿಗೆ ಪ್ರವೇಶ ಕಲ್ಪಿಸಲು ಮಧ್ಯಂತರ ಆದೇಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು. ವಾದ-ವಿವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದರು.
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಆರಂಭ
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ಗದ್ದಲ ಜೋರಾಗಿದೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷದ ಬಗ್ಗೆ ಚರ್ಚೆ ನಡೆಯಲಿದ್ದು, ವಿವಿಧ ಜಿಲ್ಲೆಗಳ ಪರಿಸ್ಥಿತಿ ಕುರಿತಾಗಿ ಸಚಿವರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ವಿವಿಧ ಜಿಲ್ಲೆಗಳ ಮಾಹಿತಿಯನ್ನು ಸಂಗ್ರಹಿಸಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.