ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣ ಮಾಡಿದರು. ನಿನ್ನೆ ಹಿಜಾಬ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಇಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು.
ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮುಂಜಾನೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್ಎಸ್ಯುಐ) ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿದರು.
ನಿನ್ನೆ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಕಲ್ಲು ತೂರಾಟವೂ ನಡೆದಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಕಾಲೇಜು ಅವರಣದಲ್ಲಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದರು. ನಂತರ ಇದನ್ನು ಪೊಲೀಸರು ತೆರವುಗೊಳಿಸಿದ್ದರು.
ಇಂದು ಬೆಳಗ್ಗೆ ಎನ್ಎಸ್ಯುಐನ ರಾಜ್ಯ ಕಾರ್ಯದರ್ಶಿ ಚೇತನ್, ಮಧುಸೂಧನ್, ಜಿಲ್ಲಾಧ್ಯಕ್ಷ ವಿಜಯ್ ಸೇರಿದಂತೆ ಇನ್ನಿತರರು ಸೇರಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ.
ಈ ವಿಚಾರವನ್ನು ಕಾಲೇಜಿನ ವಾಚ್ಮ್ಯಾನ್ ಪ್ರಾಂಶುಪಾಲರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪ್ರಾಂಶುಪಾಲ ಧಜಂಜಯ್, ಎಸ್ಪಿ ಲಕ್ಷ್ಮಿ ಪ್ರಸಾದ್ ಹಾಗೂ ಕೋಟೆ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ರಾಷ್ಟ್ರ ಧ್ವಜವನ್ನು ಗೌರವಯುತವಾಗಿ ಕೆಳಗಿಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.