ಬಿದರಹಳ್ಳಿಯಲ್ಲಿ ಮಗು ಸಮೇತ ತಾಯಿ ಆತ್ಮಹತ್ಯೆ ಪ್ರಕರಣ : ಅಮಾಯಕ ಮಗುವಿನ ಹತ್ಯೆಗೆ ಹೊಣೆ ಯಾರು……!?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿಯ ಬಿದರಹಳ್ಳಿ ಗ್ರಾಮದ ಸಮೀಪದ ಚಿಟ್ಟೆ ಗೆದ್ದೆಯ ಮುದ್ದುಮುಖದ ನಾಲ್ಕು ವರ್ಷದ  ತನ್ವಿ ಎಂಬ ಪುಟ್ಟ ಮುದ್ದು ಕಂದಮ್ಮನ ಹತ್ಯೆಗೆ ಹೊಣೆ ಯಾರು.
ಅಜ್ಜ-ಅಜ್ಜಿಯೋ?. ತಂದೆಯೋ?  ಅಥವಾ ಲೋಕದ ಅರಿವಿಲ್ಲದ ಚಂದದ ಮುಗ್ಧ ಬಾಲಕಿಯನ್ನು ವೇಲಿನಿಂದ ಸೊಂಟಕ್ಕೆ ಕಟ್ಟಿ ಬಾವಿಗೆ ಹಾರಿದ ತಾಯಿ ವಿದ್ಯಾ ಕಾರಣವಾದರೆ ???
2014 ರಲ್ಲಿ ಚಿಟ್ಟೆಗೆದ್ದೆ ಯ ಲೋಹಿತ ಎಂಬುವರೊಂದಿಗೆ ಮದುವೆಯಾಗಿದ್ದ  ವಿದ್ಯಾ ಅತ್ತೆ ಮಾವ ಮತ್ತು ಗಂಡನ ಕಿರುಕುಳದಿಂದ ಬೇಸತ್ತು ಮೇಲಿನಿಂದ ತನ್ನ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬುಧವಾರ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾಳ ಪೋಷಕರು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನೂ ಅರಿಯದ ಮುಗ್ಧ ಮುದ್ದು ಮಗುವಿನ ಹತ್ಯೆಗೆ ಹೊಣೆ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಈ ತರಹದ ಘಟನೆ ಮತ್ತೆ ಮರುಕಳಿಸದಿರಲಿ
ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಮನಸ್ಸಿಗೆ ಪೋಸ್ಟ್ ಮ್ಯಾನ್ ನ್ಯೂಸ್ ಕಡೆಯಿಂದ ಸಣ್ಣ ಮನವಿ ::
ಅಷ್ಟಕ್ಕೂ ಈ ಸಮಾಜದಲ್ಲಿ ನೀವೊಬ್ಬರೇ ಇಲ್ಲ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರನ್ನೂ ಪರಿಗಣಿಸಿ. ಎಲ್ಲ ಪರಿಸ್ಥಿತಿಯನ್ನೂ ಸಾವಧಾನದಿಂದ, ಸಮಾಧಾನದಿಂದ ನಿಭಾಯಿಸಿ. ಯಾವುದೇ ಸಮಸ್ಯೆಯಿದ್ದರೂ ದಯವಿಟ್ಟು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಚರ್ಚಿಸಿ. ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. 
ಬಹಳ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಆತ್ಮಹತ್ಯೆಗೆ ಕಾರಣವಾದ ಕೆಲವು ಅಂಶಗಳ ಬಗ್ಗೆ ಮಾತನಾಡೋಣ. ಇವುಗಳಿಂದ ಖಂಡಿತವಾಗಿಯೂ ಆತ್ಮಹತ್ಯೆ ಜಯಿಸಲು ಸಾಧ್ಯವಿದೆ …
1. ಸ್ನೇಹಿತರ ಸಂಖ್ಯೆ ಶೂನ್ಯ: ನಮ್ಮ ಮೊಬೈಲ್ನಲ್ಲಿ ನೂರಾರು ಜನರ ದೂರವಾಣಿ ಸಂಖ್ಯೆ ಇರಬಹುದು. ಆದರೆ, ಮನಸ್ಸಿನ ದುಃಖ ಹೇಳಿಕೊಳ್ಳಲು, ಸಂತೋಷ ಹಂಚಿಕೊಳ್ಳಲು, ಯಾವುದೇ ಭಯವಿಲ್ಲದೆ ಮನಬಿಚ್ಚಿ ಮಾತನಾಡಲು ಇರುವ ಸ್ನೇಹಿತರ ಸಂಖ್ಯೆ ಅಲ್ಲಿ ಶೂನ್ಯ. ಇನ್ನು, ಸ್ನೇಹಿತರನ್ನು ಭೇಟಿ ಮಾಡದಿರುವುದು, ಕುಟುಂಬ, ಪರಿವಾರದವರೊಂದಿಗೆ ಮನಬಿಚ್ಚಿ ಮಾತನಾಡದಿರುವುದು ಅಪಾಯದ ಸಂಕೇತ. ಮನಬಿಚ್ಚಿ ಮಾತನಾಡುವುದನ್ನು ನಿಲ್ಲಿಸಿದಾಕ್ಷಣ ಅದು ಮಾನಸಿಕ ಸಮಸ್ಯೆಗೆ ದಾರಿಯಾಗುತ್ತದೆ. ನಿಮ್ಮಿಂದ ಏನೇ ತಪ್ಪಾಗಿರಬಹುದು, ಆದರೆ ಆ ತಪ್ಪು ಏಕಾಯಿತು? ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಲು ಖಂಡಿತಾ ಸಾಧ್ಯವಿದೆ. ಏಕೆಂದರೆ ಸಮಯ ಅನ್ನೋದು ನಿಮ್ಮ ಸ್ನೇಹಿತ ಇದ್ದ ಹಾಗೆ. ಸಮಯವೆಂಬ ನದಿ ತನ್ನ ಗರ್ಭಾಶಯದಲ್ಲಿ ಎಲ್ಲಾ ಕೊಳಕನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ ಸಮಯದ ಮೇಲೆ ಭರವಸೆ ಇಡಿ. ಜನ ಏನು ಹೇಳುತ್ತಾರೆ? ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಚಿಂತೆ ಬಿಡಿ.
2. ಜನರು ಯಾವಾಗಲೂ ಏನಾದರೂ ಹೇಳುತ್ತಲೇ ಇರುತ್ತಾರೆ. ಅದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿ. ಒಣ ಪ್ರತಿಷ್ಠೆ ಮತ್ತು ಗೌರವವೆಂಬ ಅಂಧಕಾರದಿಂದ ಹೊರಬನ್ನಿ. ಇಲ್ಲವಾದರೆ ಜೀವನ ಉಸಿರುಗಟ್ಟುವಂತೆ ಆಗುತ್ತದೆ. 
3. ಉರಿಯುತ್ತಿರುವ ಸೂರ್ಯನನ್ನು ಹೇಗೆ ಸಹಿಸಿಕೊಳ್ಳುತ್ತೇವೋ ಹಾಗೇ ಜೀವನದ ಕಷ್ಟಗಳನ್ನು ಎದುರಿಸಬೇಕು. ಅದನ್ನು ಬಿಟ್ಟು ಜೀವವನ್ನೇ ಕಳೆದುಕೊಳ್ಳುವುದಲ್ಲ. ಶಿಕ್ಷಣ, ಕಲೆ, ಸಾಹಿತ್ಯ ಜ್ಞಾನದ ಅಭಾವದಿಂದಾಗಿ ನಾವು ಮತ್ತಷ್ಟು ಖಿನ್ನತೆಗೆ ಒಳಗಾಗುತ್ತಿದ್ದೇವೆ. ಇದರಿಂದ ದುಃಖ, ನೋವು ಮತ್ತು ಒಬ್ಬರು ಮತ್ತೊಬ್ಬರನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ.
4. ಮಾನಸಿಕ ಉದ್ವೇಗ, ಅಸಂತೋಷ, ತಪ್ಪಿತಸ್ಥ ಮನೋಭಾವ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಮೇಲ್ನೋಟಕ್ಕೆ ಸಂತೋಷದಿಂದಿರುವ ಯಶಸ್ವಿ ವ್ಯಕ್ತಿಗಳಾಗಿ ಕಂಡರೂ ಅವರ ಮನಸ್ಸಿನಲ್ಲಿ ಅಡಗಿರುವ ಖಿನ್ನತೆ ಮತ್ತು ಒಂಟಿತನವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಅದನ್ನು ಅರಿಯಲು ಸಾಕಷ್ಟು ಸೂಕ್ಷ್ಮವಾಗಿ, ಗಹನವಾಗಿ ಪ್ರಯತ್ನಿಸಬೇಕಾಗುತ್ತದೆ. ಇದರಿಂದ ಅಕಾಲಿಕ ಸಾವಿಗೆ ತುತ್ತಾಗುವುದನ್ನು ತಡೆಯಬಹುದು.
5. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಏನೂ ಸಿಗುವುದಿಲ್ಲ. ಬದಲಾಗಿ ಇದೊಂದು ಅಹಿತಕರ, ಕಹಿ ಘಟನೆಯಾಗಿ, ಬಗೆಹರಿಸಲಾಗದ ಪ್ರಶ್ನೆಗಳು ನಿಮ್ಮ ಪ್ರೀತಿಪಾತ್ರರನ್ನು ಕಾಡುತ್ತವೆ. ಹಾಗಾಗಿ, ಆತ್ಮಹತ್ಯೆ ಎಂಬುದು ನಿಮ್ಮನ್ನು ಪ್ರೀತಿಸುವವರಿಗೆ ನೀವು ಮಾಡುವ ಘೋರ ಅಪರಾಧ.

Leave a Reply

Your email address will not be published. Required fields are marked *