ಕಳೆದ ಐದು ತಿಂಗಳುಗಳಿಂದ ಪಡಿತರ ವ್ಯವಸ್ಥೆಯಲ್ಲಿ ಸೀಮೆ ಎಣ್ಣೆ ಇಲ್ಲ : ಜಾಣ ಕುರುಡು ಪ್ರದರ್ಶಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು

ರಿಪ್ಪನ್ ಪೇಟೆ: ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿದ್ದ ಸೀಮೆ ಎಣ್ಣೆಯನ್ನು ಸರ್ಕಾರ ಅಕ್ಟೋಬರ್ ತಿಂಗಳಿನಿಂದ ಸ್ಥಗಿತಗೊಳಿಸಿದ್ದು, ಗ್ರಾಮೀಣ ಜನತೆ ಬೆಳಕಿಗೆ, ಸಣ್ಣ ಕೃಷಿಕರು ತೋಟಕ್ಕೆ ನೀರು ಹಾಯಿಸಲು ಪರದಾಡುವಂತಾಗಿದೆ.

ನಮ್ಮ ಹೊಸನಗರ ತಾಲೂಕು ಮಲೆನಾಡ ಪ್ರದೇಶವಾಗಿರುವುದರಿಂದ ಪಡಿತರ ಚೀಟಿದಾರರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಸೀಮೆ ಎಣ್ಣೆ ವಿತರಣೆಯನ್ನು ಕಳೆದ ನಾಲ್ಕೈದು ತಿಂಗಳುಗಳಿಂದ ಸರ್ಕಾರ ನಿಲ್ಲಿಸಿದೆ.

ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಬೇಕಾಗಿರುವ ಜನಪ್ರತಿನಿಧಿಗಳು ಹಾಗೂ ಸೋಕಾಲ್ಡ್ ಹೋರಾಟಗಾರರು ಬಾಯಿಗೆ ಬೆರಳಿಟ್ಟುಕೊಂಡು ಕುಳಿತಿದ್ದಾರೆಯೇ ಹೊರತು ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ.


ಸೀಮೆಎಣ್ಣೆ ಬಹು ಉಪಯೋಗಿ­ಯಾಗಿದ್ದು, ಅಡುಗೆ ಮಾಡಲು ಮಾತ್ರ ಅದನ್ನು ಬಳಕೆ ಮಾಡುತ್ತಿಲ್ಲ. ಗ್ರಾಮೀಣ ಜನರು ಬೆಳಕಿಗೆ, ನೀರಾವರಿ ಪಂಪ್‌, ಜನರೇಟರ್‌ಗೆ ಈಗಲೂ ಸೀಮೆಎಣ್ಣೆ­ಯನ್ನೇ ಅವಲಂಬಿಸಿದ್ದಾರೆ.
ರಾತ್ರಿ ವೇಳೆ ನಿರಂತರ ವಿದ್ಯುತ್ ಕಡಿತ, ಅನಿಯಮಿತ ಕಡಿತ, ವಿದ್ಯಾರ್ಥಿ­ಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದರೂ ವಿದ್ಯುತ್ ಕಡಿತ ಮಾತ್ರ ನಿಂತಿಲ್ಲ. ಬೆಳಕಿಗೆ ಸೀಮೆ ಎಣ್ಣೆ `ಬುಡ್ಡಿ ದೀಪ’ವೇ ಅನಿವಾರ್ಯವಾಗಿದೆ. ಎಲ್ಲರಿಗೂ ಇನ್‍ವರ್ಟರ್‌ ಕೊಳ್ಳುವ ಶಕ್ತಿ ಇರುವುದಿಲ್ಲ. ಸೀಮೆಎಣ್ಣೆಯ ಪೂರೈಕೆ ಸ್ಥಗಿತಗೊಂಡರೆ ವಿದ್ಯುತ್ ಕಡಿತದ ಸಮಯದಲ್ಲಿ ಬಡ ಜನರು ಕತ್ತಲಿನಲ್ಲಿಯೇ ಕಳೆಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗ­ಬಹುದು ಎಂದು ಜನರು ಹೇಳುತ್ತಾರೆ.

ವಿದ್ಯುತ್ ಕೈಕೊಟ್ಟಾಗ ಸಣ್ಣ ಉದ್ದಿಮೆ ನಡೆಸುವವರು, ವ್ಯಾಪಾರಿಗಳೂ ಸೀಮೆ­ಎಣ್ಣೆ ಜನರೇಟರ್‌ಗಳನ್ನೇ ಅವಲಂಬಿಸಿ­ದ್ದಾರೆ. ಅವರೂ ದೊಡ್ಡ ಡೀಸೆಲ್ ಜನರೇಟರ್‌ ಖರೀದಿಸಬೇಕಾಗಿದೆ. ಆದರೆ ಅದು ದುಬಾರಿ, ನಿರ್ವಹಣಾ ವೆಚ್ಚ ಅಧಿಕ ಮತ್ತು ಅದನ್ನು ಇಡಲು ಹೆಚ್ಚಿನ ಸ್ಥಳಾವಕಾಶವೂ ಅಗತ್ಯವಾದ್ದರಿಂದ ಎಲ್ಲರೂ ಸೀಮೆ ಎಣ್ಣೆ ಚಾಲಿತ ಜನರೇಟರ್‌ ಬಳಸುತ್ತಿದ್ದಾರೆ.

ಪಡಿತರ ಸೀಮೆಎಣ್ಣೆ ಕಾಳಸಂತೆಗೆ ಹೋಗುತ್ತಿದೆ ಎಂಬ ಕಾರಣಕ್ಕೆ 20 ವರ್ಷಗಳ ಹಿಂದೆ ಸೀಮೆಎಣ್ಣೆಯನ್ನು ಸರ್ಕಾರ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮುಕ್ತ ಮಾರುಕಟ್ಟೆ ಸೀಮೆ ಎಣ್ಣೆ ಪಾರದರ್ಶಕ ಬಣ್ಣ ಹೊಂದಿದ್ದರೆ, ಪಡಿತರ ಸೀಮೆಎಣ್ಣೆಗೆ ನೀಲಿ ಬಣ್ಣವನ್ನು ನೀಡಲಾಗಿತ್ತು.
ಮುಕ್ತ ಮಾರುಕಟ್ಟೆಯ ಸೀಮೆ ಎಣ್ಣೆ ದುಬಾರಿಯಗಿದ್ದರಿಂದ ಈ ಯೋಜನೆ ಆರಂಭದಲ್ಲೇ ವಿಫಲ­ವಾಯಿತು. ಹಾಗಾಗಿ ಈಗ ಮುಕ್ತ ಮಾರುಕಟ್ಟೆಯಲ್ಲೂ ಸೀಮೆಎಣ್ಣೆ ಸಿಗುತ್ತಿಲ್ಲ.

ಪಂಪ್‌ ಮೂಲಕ ನೀರೆತ್ತುತ್ತಿದ್ದವರು ಇದೀಗ ಸಮಸ್ಯೆ ಎದುರಿಸಬೇಕಾಗಿದೆ. ಈಗ ಪಡಿತರದಲ್ಲೂ, ಮುಕ್ತ ಮಾರುಕಟ್ಟೆ­­ಯಲ್ಲೂ ಸೀಮೆ ಎಣ್ಣೆ ಸಿಗದ ಕಾರಣ ಬಡ ಕೃಷಿಕರೂ ನೀರಿಗೆ ಪರದಾಡುವಂತಾಗಿದೆ.

Leave a Reply

Your email address will not be published. Required fields are marked *