ಶಿವಮೊಗ್ಗ: ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವ ಮತ್ತು ಅವರ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ಮೋದಿ ನಿನ್ನೆ ಪಂಜಾಬ್ ನಲ್ಲಿರುವ ಭಟಿಂಡಾದಿಂದ ಫಿರೋಜ್ ಪುರದ ಹುಸೇನ್ ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಅಲ್ಲಿ ಅವರು ಭಗತ್ ಸಿಂಗ್ ಇತರ ಸ್ವಾತಂತ್ರ್ಯವೀರ ಹುತಾತ್ಮರಿಗೆ ಗೌರವ ಸಲ್ಲಿಸುವ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವಿತ್ತು ಹವಾಮಾನ ವೈಫಲ್ಯದ ಹಿನ್ನಲೆಯಲ್ಲಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು. ಅಲ್ಲಿನ ಸುರಕ್ಷಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರ ಅನುಮತಿ ಪಡೆದೇ ರಸ್ತೆ ಮೂಲಕ ತೆರಳಲು ನಿರ್ಧರಿಸಲಾಗಿತ್ತು ಎಂದರು.
ಪ್ರಧಾನಿ ಮೋದಿ ತೆರಳುವ ರಸ್ತೆಯ ಇನ್ನೊಂದು ಬದಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿತ್ತು. ಇದರಿಂದ ವಿಚಲಿತರಾದ ಪ್ರಧಾನ ಮಂತ್ರಿಯವರ ಬೆಂಗಾವಲು ಪಡೆ ಆತಂಕಗೊಂಡು ಪಂಜಾಬ್ ಸರ್ಕಾರದ ಮುಖ್ಯಮಂತ್ರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ದೊರೆಯಲಿಲ್ಲ. ಆ ರಾಜ್ಯದ ಭದ್ರತಾ ಅಧಿಕಾರಿಗಳು ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಇದು ಪ್ರಧಾನ ಮಂತ್ರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ತಿಳಿಸಿದರು. ಅತ್ಯಂತ ದುರದೃಷ್ಟಕರ ಎಂದರೆ ಘಟನಾ ಸ್ಥಳದಿಂದ ಪಾಕಿಸ್ತಾನ ಗಡಿಗೆ ಕೇವಲ 10 ಕಿ.ಮೀ. ದೂರವಿದೆ. ಪ್ರಧಾನಮಂತ್ರಿಯವರ ಹತ್ಯೆಗೆ ಪಾಕಿಸ್ತಾನ, ಖಲಿಸ್ಥಾನದ ಭಯೋತ್ಪಾದಕರು ಏಕೆ ಪ್ರಯತ್ನಿಸಿರಬಾರದು. ಪಂಜಾಬ್ ನ ಕಾಂಗ್ರೆಸ್ ಸರ್ಕಾರ ಈ ಸಂಚನ್ನು ರೂಪಿಸಿತ್ತೇ ಎಂಬ ಶಂಕೆ ಭಾರತದ ಎಲ್ಲಾ ಪ್ರಜೆಗಳಿಗೆ ಮೂಡಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ರಾಷ್ಟ್ರದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಡೀ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭಭಟ್, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಎನ್.ಕೆ. ಜಗದೀಶ್, ಚನ್ನಬಸಪ್ಪ, ಮೇಯರ್ ಸುನಿತಾ ಅಣ್ಣಪ್ಪ, ಅನಿತಾ ರವಿಶಂಕರ್, ಸುವರ್ಣಾ ನಾಗರಾಜ್, ಸುರೇಖಾ ಮುರಳೀಧರ್ ಮೊದಲಾದವರಿದ್ದರು.
ವರದಿ : ಮಂಜುನಾಥ್ ಶೆಟ್ಟಿ ಶಿವಮೊಗ್ಗ