ರಿಪ್ಪನ್ ಪೇಟೆ: ಅಸಮರ್ಪಕ ರಸ್ತೆ ನಿರ್ವಹಣೆ ಹಾಗೂ ಹೊಂಡ ಗುಂಡಿಗಳಿಗೆ ತೇಪೆ ಹಾಕುವ ಪ್ರಕ್ರಿಯೆಯಲ್ಲಿ ಲೋಪ ಎಸಗಲಾಗಿದೆ. ಸರಿಯಾದ ರೀತಿಯಲ್ಲಿ ಹೊಂಡ ಗುಂಡಿಗಳನ್ನು ಮುಚ್ಚದೆ ಬೇಕಾಬಿಟ್ಟಿಯಾಗಿ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಡಾಂಬರೀಕರಣದ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀರಿಗೆಮನೆ ಎಂಬಲ್ಲಿ ನಡೆದಿದೆ.
ಹಲವಾರು ವರ್ಷಗಳ ಹಿಂದೆ ರಿಪ್ಪನ್ ಪೇಟೆ ಯಿಂದ ಹೆದ್ದಾರಿಪುರ ಮಾರ್ಗವಾಗಿ ಜೀರಿಗೆಮನೆ ವಡಹೊಸಹಳ್ಳಿ ಮಾರ್ಗವನ್ನು ಮಾಡಲಾಗಿತ್ತು. ಆದರೆ ಇದೀಗ ಡಾಂಬರೀಕರಣ ಮಾಡಿ ಕೆಲವು ವರ್ಷಗಳು ಕಳೆದರೂ ಮರು ಡಾಂಬರೀಕರಣ ಮಾಡದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು,ಇದೀಗ ಕಣ್ಣಾಮುಚ್ಚಾಲೆ ಆಟವೆಂಬಂತೆ ಬೇಕಾಬಿಟ್ಟಿಯಾಗಿ ಹೊಂಡ ಗುಂಡಿಗಳನ್ನು ಮುಚ್ಚದೆ ಡಾಂಬರೀಕರಣ ಮಾಡುತಿದ್ದಾರೆ ಹಾಗೂ ಇದರ ಬಗ್ಗೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯತನ ತೋರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಡಾಂಬರೀಕರಣದ ವಾಹನ ತಡೆದು ದಿಢೀರ್ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ಸಂಧರ್ಭದಲ್ಲಿ ನಿವೃತ್ತ ಸೈನಿಕರಾದ ಸತೀಶ್ ಜೀರಿಗೆಮನೆ ಮಾತನಾಡಿ ಲೋಕೊಪಯೋಗಿ ಇಲಾಖೆ ಅಭಿಯಂತರರಾದ ಮಲ್ಲಿಕಾರ್ಜುನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸದೆ ಕೂತಲ್ಲೆ ರಸ್ತೆ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿದ್ದಾರೆ, ಕಿತ್ತುಹೋದ ರಸ್ತೆಗೆ ತೇಪೆ ಹಾಕಲು ಬಂದಿದ್ದ ಕಾರ್ಮಿಕರನ್ನು ತಡೆದು, ಇಂಜಿನಿಯರ್ ಗೆ ಮಾಹಿತಿ ನೀಡಲು ಕರೆ ಮಾಡಿದರೂ ಕೇವಲ ಉಡಾಫ಼ೆಯ ಉತ್ತರ ನೀಡುತ್ತಾರೆಯೇ ಹೊರತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಶಾಸಕರು ಇಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಗ್ರಾಮಗಳಿಗೆ ಬರುವ ರಸ್ತೆ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅರುಣಭಂಡಾರಿ,ಉದಯ, ಶೇಖರಪ್ಪ , ಓಂರಾಜ , ಜಗದೀಶ , ರಾಜು, ಸತೀಶ, ಗಣೇಶ ,ಸಂತೋಷ, ಪಾಂಡು, ಪ್ರಶಾಂತ್ ಹಾಗೂ ಇನ್ನಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು