ಹೊಸನಗರ :ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಮೀಪ ವಾರಂಬಳ್ಳಿ ಯ ಸರಿಸುಮಾರು ಎಂಟು, ಮತ್ತು ಹತ್ತನೇ ಶತಮಾನದ ಐತಿಹಾಸಿಕ ಸುಪ್ರಸಿದ್ಧ ಶಿವನ ಆಲಯ ಕಲ್ಯಾಣಿ ಶ್ವರ ದೇವಸ್ಥಾನದ ಸಪರಿವಾರ ಕಲ್ಯಾಣಿಶ್ವರನ ಶಿಲಾಮಯ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು. ಫೆಬ್ರವರಿ 2ರಂದು ಪುನರ್ ಪ್ರತಿಷ್ಠಾಪನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ಮರುದಿನ ಬ್ರಹ್ಮಕಲಶೋತ್ಸವ ಹಾಗೂ ಪೂರ್ಣಾಹುತಿಯನ್ನು ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳಿಂದ ನೆರವೇರಲಿದೆ.
ದೇವಾಲಯದ ಐತಿಹಾಸಿಕ ಹಿನ್ನೆಲೆ :
ದೇವಸ್ಥಾನದ ಐತಿಹಾಸಿಕ ಹಿನ್ನೆಲೆ ಕುರಿತು ಇತಿಹಾಸಕಾರರಾದ ಅಂಬ್ರಯ್ಯ ಮಠ ಹೇಳುವಂತೆ::ಹೊಸನಗರದ ಪುಟ್ಟ ಪ್ರಕೃತಿಯ ಮಧ್ಯೆ ಇರುವ ವಾರಂಬಳ್ಳಿ ಎಂಬುದೊಂದು ಹಳ್ಳಿ.ಇದು ಹೊಸನಗರದಿಂದ ಸರಿಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ.ಜಯನಗರವನ್ನು ಬಳಸಿಕೊಂಡು ತೀರ್ಥಹಳ್ಳಿಗೆ ಹೋಗುವ ರಾಜ್ಯ ರಸ್ತೆಯಿಂದ ಸುಮಾರು 1km ಕ್ರಮಿಸಿದರೆ ಮಠದಹಕ್ಲು ಎಂಬ ಜಾಗ ಸಿಕ್ಕುತ್ತದೆ.ಪೂರ್ವಕ್ಕೆ ಈರಗೋಡು ಪಶ್ಚಿಮಕ್ಕೆ ರಾಮಚಂದ್ರಪುರ ಮಠ,ದಕ್ಷಿಣಕ್ಕೆ ಕೊಳಗಿ-ಗೊರಗೋಡು ಉತ್ತರಕ್ಕೆ ಬಾವಿಕೇವಿ ಗಡಿಗಳನ್ನು ಹೊಂದಿರುವ ಮಠದ ಹಕ್ಲುವಿನಲ್ಲಿ ಒಂದು ಚಿಕ್ಕ ದೇವಾಲಯ ಸಿಕ್ಕುತ್ತದೆ.ಜಂಬಿಟ್ಟಿಗೆ ಕಲ್ಲುಗಳಿಂದ ನಿರ್ಮಿತವಾಗಿರುವ ಈ ದೇವಾಲಯವು 4 ಅಡಿ ಉದ್ದ 4 ಅಡಿ ಅಗಲದ ಚಚ್ಚೌಕದಲ್ಲಿದೆ.ಕ್ರಿ.ಶ 8ನೇ ಶತಮಾನದಷ್ಟು ಪ್ರಾಚೀನವಾದ ದಿವ್ಯ ಶಿವಲಿಂಗುವಿರುವ ಈ ದೇವಾಲಯಕ್ಕೆ ಶ್ರೀ ಕಲ್ಯಾಣೇಶ್ವರ ಎಂದು ಸ್ಥಳೀಯರು ಕರೆಯುತ್ತಾರೆ.ಮದುವೆಯಾಗದ ಗಂಡು ಹಾಗೂ ಹೆಣ್ಣು ಮಕ್ಕಳು ತಮಗೆ ಒಳ್ಳೆಯ ಹೆಣ್ಣು/ಗಂಡು ಸಿಕ್ಕುವಂತಾಗಲಿ ಎಂದಿಲ್ಲಿ ಬೇಡಿಕೊಳ್ಳುತ್ತಾರೆ.
ತಮ್ಮ ಬೇಡಿಕೆಗೆ ಸಾಕ್ಷಿಯಾಗಿ ಹಲವಾರು ರೀತಿಯಲ್ಲಿ ಹರಕೆಯನ್ನೂ ಹೊತ್ತು ಹೋಗುತ್ತಾರೆ.”ಭಕ್ತರ ಮದುವೆಯ ಶುಭ ಕಾರ್ಯದ ಬೇಡಿಕೆಯು ಬಹುಬೇಗನೆ ಪೂರೈಸುವುದರಿಂದ ಈ ದೇವರಿಗೆ ಶ್ರೀ ಕಲ್ಯಾಣೇಶ್ವರ ಎಂದೇ ಪ್ರತೀತಿ ಇದೆ”.ಮಕ್ಕಳಿಲ್ಲದವರು ತಮಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತಾರೆ.ತಮ್ಮ ಕುಟುಂಬದಲ್ಲಿ ಆಗಿಹೋದ/ಆಗಲಿರುವ ಸಮಸ್ಯೆಗಳನ್ನು,ಕುಂದುಕೊರತೆಗಳನ್ನು ಬೇರೊಬ್ಬರಿಂದ ತಮಗಾದ ಕಷ್ಟಕ್ಕೆ,ನಷ್ಟಕ್ಕೆ ಪರಿಹಾರವನ್ನು ಕೇಳಿ ಬಂದಿಲ್ಲಿ ಪ್ರಾರ್ಥಿಸುತ್ತಾರೆ.ಕೇವಲ ಪ್ರಾರ್ಥಿಸುವುದು ಮಾತ್ರವಲ್ಲ ಆ ಕುರಿತಂತೆ ಒಂದು ಗಂಟೆಯನ್ನೂ ಕಟ್ಟಿ ಹೋಗುತ್ತಾರೆ.ಭಕ್ತರ ಕೇಳಿಕೆ ಹುಸಿಯಾಗುವುದಿಲ್ಲ.ಆತ್ಮ ಸಾಕ್ಷಿಯಾಗಿ ಕೇಳಿದರೆ ಕೊಡಬಲ್ಲ ದೇವರು ಶ್ರೀ ಕಲ್ಯಾಣೇಶ್ವರ ಎನ್ನುತ್ತಾರೆ ಇಲ್ಲಿಯ ಭಕ್ತಾದಿಗಳು.
ಇಂತ ಹೇಳಿಕೆಗಳು,ಕೇಳಿಕೆಗಳು ಇಂದಿನವಲ್ಲ,ಹಿಂದಿನಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ ಕ್ರಿ.ಶ.8ನೇ ಶತಮಾನದಿಂದ ಈ 21ನೇ ಶತಮಾನದುದ್ದಕ್ಕೂ ಈ ದೇವಾಲಯಕ್ಕೆ ಭಕ್ತಾದಿಗಳು ಹರಕೆ ಹೊತ್ತಿದ್ದಾರೆ,ಪೂಜಿಸುತ್ತ ಬಂದಿದ್ದಾರೆ.
ಬಿದನೂರು ರಾಜಧಾನಿ ಆಗಿದ್ದ ಕಾಲದಲ್ಲಿ ಅಂದರೆ 1500-1763ರ ವರೆಗೂ ಈ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಳದಿ ನಾಯಕರ ಪ್ರಭಾವ ಸಾಕಷ್ಟು ಇತ್ತುಕೆಳದಿ ಸಂಸ್ಥಾನದ ಕಾಲದಲ್ಲಿಯಂತೂ(1618-1763)ವಿಶೇಷ ಪೂಜೆ, ಹೋಮ-ಹವನಗಳು ಉತ್ಸವಗಳು ಇಲ್ಲಿ ನಡೆಯುತ್ತಿದ್ದವು.ಏನೇ ಇರಲಿ ಕಲ್ಯಾಣೇಶ್ವರ ಎಂಬ ಈ ಪ್ರಾಚೀನ ದೇವಾಲಯವು ಹಿಂದಿನಿಂದಲೂ ಪ್ರಸಿದ್ಧವಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ.ಹಾಗೂ ಇತ್ತೀಚಿಗೆ ಅಲ್ಲಿಯೇ ಸಿಕ್ಕ ಅತ್ಯಂತ ಚಿಕ್ಕದು ಆದರೆ ಕಲಾತ್ಮಕತೆಯಿಂದ ಕೂಡಿದ ಶ್ರೀವೀರಭದ್ರನ ಮೂರ್ತಿಯೂ ಇಲ್ಲಿಯೇ ಇದೆ.ಹಲವಾರು ನಾಗರ ಕಲ್ಲುಗಳು,ಲಿಂಗಮುದ್ರೆ ಕಲ್ಲುಗಳು ಇಲ್ಲಿವೆ.
ಪ್ರಕೃತಿ ಮಧ್ಯದಲ್ಲಿರುವ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ.
ಸ್ಥಳ: ಹೊಸನಗರ ನಗರ ಜಯನಗರ ರಾಜ್ಯಹೆದ್ದಾರಿ ತೀರ್ಥಹಳ್ಳಿ ಮಾರ್ಗವಾಗಿ ವಾರಂಬಳ್ಳಿ ಯಲ್ಲಿದೆ
ಮಾಹಿತಿ :ಅಜಿತ್ ಗೌಡ ಬಡೇನಕೊಪ್ಪ