ಹರಿದ್ರಾವತಿ ಸರ್ಕಾರಿ ವೈದ್ಯರನ್ನು ಬದಲಾಯಿಸುವಂತೆ ಬೃಹತ್ ಪ್ರತಿಭಟನೆ : ಪ್ರತಿಭಟನೆಗೆ ಮಣಿದ ತಾಲ್ಲೂಕು ಆರೋಗ್ಯಧಿಕಾರಿ

ಹರಿದ್ರಾವತಿ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರ ಗೈರಾಗಿರುವ ವೈದ್ಯಧಿಕಾರಿಗಳ ಬದಲಿಗೆ ಬೇರೆ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಗೆ ಸ್ಪಂದಿಸಿರುವ ತಾಲ್ಲೂಕು ವೈದ್ಯಾಧಿಕಾರಿಗಳು ಸೋಮವಾರದಿಂದಲೇ ಬದಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಇಂದು ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರದ ಎದುರು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಹಳ್ಳಿ ಬಟ್ಟೆಮಲ್ಲಪ್ಪ -ಆಲಗೇರಿಮಂಡ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್ ಅವರು, ಸ್ಥಳೀಯ ಸಮಸ್ಯೆ ಅರ್ಥವಾಗಿದೆ. ಇಂದಿನಿಂದಲೇ ಬದಲಿ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಕೋವಿಡ್ ಸಮಸ್ಯೆ ಇಡೀ ಜಗತ್ತನ್ನು ಕಾಡುತ್ತಿದೆ. ಅರೋಗ್ಯ ಸೇವೆ ಸಮಾರೋಪದಿಯಲ್ಲಿ ನಡೆಯಬೇಕಿರುವ ಸಮಯದಲ್ಲಿ ಕಳೆದ ಒಂದೂವರೆ ವರ್ಷದಿಂದ ವೈದ್ಯರು ಅನಗತ್ಯ ಗೈರಾಗುತ್ತಿದ್ದಾರೆ. ಅದರಲ್ಲೂ ಕಳೆದ ಎರಡು ತಿಂಗಳಿನಿಂದ ನಿರಂತರ ಗೈರಾಗಿದ್ದಾರೆ. ಹೀಗಾಗಿ ತಕ್ಷಣವೇ ಸಂಬಂಧ ಪಟ್ಟ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರವು ಹಿಂದಿನಿಂದಲೂ ಒಳ್ಳೆಯ ಹೆಸರನ್ನು ಪಡೆದಿದೆ. ಡಾ. ಪ್ರತಿಮಾ, ಡಾ. ಜಯರಾಮ್ ಸೇರಿದಂತೆ ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಎಲ್ಲರೂ ಅತ್ಯುತ್ತಮ ಸೇವೆ ನೀಡಿದ್ದಾರೆ. ಆದರೆ ಈಗಿರುವ ವೈದ್ಯರು ತಮ್ಮ ಸೇವೆಯನ್ನೇ ಮರೆತಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹರಿದ್ರಾವತಿ, ಹರತಾಳು, ಹಾಗೂ ಪುರಪ್ಪೆಮನೆ ಪಂಚಾಯ್ತಿಗಳ ಒಟ್ಟು ವ್ಯಾಪ್ತಿಯಲ್ಲಿ ನೂರಾರು ಹಳ್ಳಿಗಳು ಒಳಗೊಂಡಿವೆ. ಈ ನಡುವೆ ಕರೋನ ಮೂರನೇ ಅಲೆ ಆತಂಕ ಒಡ್ಡಿದೆ. ಈ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಹೀಗಿರುವಾಗ ತುರ್ತಿಗೆ ಸ್ಪಂದಿಸಬೇಕಾದ ವೈದ್ಯರೆ ಇಲ್ಲ. ಹೀಗಾಗಿ ಇಂತಹ ಬೇಜವಾಬ್ದಾರಿ ವೈದ್ಯರು ನಮಗೆ ಬೇಡ ಎಂದು ಆಗ್ರಹಿಸಿದರು.

ಅಲ್ಲದೇ, ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ತಕ್ಷಣವೇ ಮೇಲ್ದರ್ಜೆಗೆ ಏರಿಸಬೇಕು. 24ಗಂಟೆಗಳ ಸೇವೆಯನ್ನು ನೀಡಬೇಕು. ಈ ಭಾಗದಲ್ಲಿ ಅಪಘಾತಗಳು ಹೆಚ್ಚಿವೆ. ಹಾಗೂ ರೈತರು ಹಾವು ಕಡಿತದಿಂದ ಹಿಡಿದು ಹಲವು  ಸಮಸ್ಯೆಗಳನ್ನು ಎದುರಿಸುತ್ತಿದ್ದೂ ನಮ್ಮ ಭಾಗಕ್ಕೆ ಪ್ರತ್ಯೇಕವಾಗಿ ಅಂಬ್ಯುಲೆನ್ಸ್  ಸೇವೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ತಾಲ್ಲೂಕು ಆರೋಗ್ಯಧಿಕಾರಿ ಮೂಲಕ ಡಿ. ಹೆಚ್. ಓ ಅವರಿಗೆ ಸಲ್ಲಿಸಲಾಯಿತು.

ಮನವಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಜಿಲ್ಲಾ ವೈದ್ಯಾಧಿಕಾರಿಗಳು, ನಿಮ್ಮೆಲ್ಲ ಬೇಡಿಕೆಗಳನ್ನು ತುರ್ತಾಗಿ ಇಲಾಖೆ ಮೂಲಕ ಬಗೆಹರಿಸುದಾಗಿ  ಭರವಸೆಯನ್ನು ನೀಡಿದರು.

ಟಿ. ಹೆಚ್. ಓ ಮತ್ತು ಡಿ. ಹೆಚ್. ಓ ಅವರ ಭರವಸೆ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಕ. ರ. ವೇ. ಅಧ್ಯಕ್ಷ ಉದಯ್ ಶೆಟ್ಟಿ, ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೆಚ್. ಆರ್. ರಾಘವೇಂದ್ರ, ಸಾಮಾಜಿಕ ಹೋರಾಟಗಾರ, ಕಲಾವಿದ ಯೇಸು ಪ್ರಕಾಶ್, ಬಂಟರ ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಂಜುನಾಥ್ ಬ್ಯಾಣದ, ಹರತಾಳು ಗ್ರಾ. ಪಂ ಸದಸ್ಯ  ನಾರಿ ರವಿ, ಮಹೇಶ್ ಶೆಟ್ಟಿ, ಅಭಿ ಶೆಟ್ಟಿ, ಜಯಕುಮಾರ್, ರಾಘವೇಂದ್ರ, ಅಶೋಕ್ ಕೆ. ಪಿ., ಅನಿಲ್,ಸಂತೋಷ್, ರಾಕೇಶ್, ಬಸವರಾಜ್, ಕಲಂದರ್, ಅಭಿಜಿತ್, ಸತೀಶ್ ಶೆಟ್ಟಿ  ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *