ಶಿವಮೊಗ್ಗದ ಹಲವು ಲಾಡ್ಜ್ ಗಳ ಮೇಲೆ ದಿಡೀರ್ ದಾಳಿ – ತಪಾಸಣೆ

ಶಿವಮೊಗ್ಗ : ನಗರದ ಸುಮಾರು 28ಕ್ಕೂ ಅಧಿಕ ವಿವಿಧ ಲಾಡ್ಜ್ ಗಳಲ್ಲಿ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿ, ತಪಾಸಣೆ ಮಾಡಿದ್ದಾರೆ.

ನಗರದ ಕೆಲವು ಲಾಡ್ಜ್ ಗಳಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಪೊಲೀಸರು ಈ ರೀತಿ ದಾಳಿ ಮಾಡಿ ತಪಾಸಣೆ ನಡೆಸಿದ್ದು, ಉಳಿದ ಲಾಡ್ಜ್ ತಪಾಸಣೆಯನ್ನು ನಾಳೆ ನಡೆಸಲು ತೀರ್ಮಾನಿಸಲಾಗಿದೆ.

ನಗರದ ಕೆಲವು ಲಾಡ್ಜ್ ನಲ್ಲಿ ಯುವಕ ಯುವತಿಯರು ಅನೈತಿಕ ಚಟುವಟಿಕೆ ಹಿನ್ನಲೆಯಲ್ಲಿ ಲಾಡ್ಜ್ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಲಾಡ್ಜ್ ಗಳ ತಪಾಸಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ನಿನ್ನೆ ಸಂಜೆ ಲಾಡ್ಜ್ ಗಳಿಗೆ ಭೇಟಿ ನೀಡಿದ ಪೊಲೀಸರು ಸರ್ಕಾರದ ಗೈಡ್ಲೈನ್ಸ್ ಪಾಲನೆ ಮಾಡುತ್ತಿದ್ದಾರಾ ಎಂದು ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ, ರಿಜಿಸ್ಟರ್ ಬುಕ್ ಸೇರಿದಂತೆ ಅನೇಕ ದಾಖಲೆಗಳನ್ನು ಕೂಡ ಪರಿಶೀಲಿಸಿದ್ದಾರೆ.

ಈ ಕುರಿತು ವಿವರಣೆ ನೀಡಿದ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರು, ಇತ್ತೀಚೆಗೆ ಅನ್ಯ ಕೋಮಿನ ಯುವಕ ಯುವತಿಯರು ಲಾಡ್ಜ್ ನಲ್ಲಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇಲ್ಲಿ ನೈತಿಕ ಪೊಲೀಸ್ ಗಿರಿಯ ಆರೋಪಗಳು ಕೂಡ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಲಾಡ್ಜ್ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಬಸ್ ನಿಲ್ದಾಣದ ಬಳಿ ಇರುವ ದುರ್ಗಾಂಬ ಲಾಡ್ಜ್ ನಲ್ಲಿ ತಪಾಸಣೆ ನಡೆಸಲು ಹೋದ ದೊಡ್ಡಪೇಟೆ ಪೊಲೀಸರಿಗೆ ಮನೆ ಮನೆಗೆ ಹೋಗಿ ಚಿನ್ನದ ಪಾಲಿಶ್ ಮಾಡಿಕೊಡುವ ಇಬ್ಬರು ಹುಡುಗರು ಲಾಡ್ಜ್ ನಲ್ಲಿ ರೂಂ ಮಾಡಿಕೊಂಡಿದ್ದು ಅವರನ್ನೂ ಸಹ ತಪಾಸಣೆಗೆ ಒಳಪಡಿಸಲಾಗಿದೆ. ನಗರದಲ್ಲಿ 50 ಲಾಡ್ಜ್ ಗಳಿದ್ದು ಅದರಲ್ಲಿ ಇವತ್ತು 28 ಲಾಡ್ಜ್ ಗಳ ತಪಾಸಣೆ ನಡೆಸಲಾಗಿದೆ. ಉಳಿದ ಲಾಡ್ಜ್ ಗಳ ತಪಾಸಣೆ ಇಂದು ನಡೆಯಲಿದೆ ಎಂದರು.

Leave a Reply

Your email address will not be published. Required fields are marked *