ರಿಪ್ಪನ್ ಪೇಟೆ : ಪಟ್ಟಣದ ಆರ್ ಸಿಸಿ ಆಟದ ಮೈದಾನದಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಇಲೆವೆನ್ ಸ್ಟಾರ್ ಕ್ರಿಕೆಟ್ ತಂಡ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದ ಎಕೆ ಲಯನ್ಸ್ ಕ್ರಿಕೆಟ್ ಕ್ಲಬ್ ಶಿವಮೊಗ್ಗ ತಂಡಕ್ಕೆ ಪುನೀತ್ ರಾಜ್‍ಕುಮಾರ್ ಟ್ರೋಫಿಯನ್ನು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ವಿತರಿಸಿದರು.
ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ನಾಯಕತ್ವ ಗುಣ ರೂಪುಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಗಿಂತ, ವಾಟ್ಸ್ಆ್ಯಪ್, ಫೆಸ್ ಬುಕ್ ನಂತಹ ತಂತ್ರಜ್ಞಾನದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ ಮೊಬೈಲ್, ಕಂಪ್ಯೂಟರ್ ಮೂಲಕ ವಿವಿಧ ರೀತಿಯ ಆಟಗಳನ್ನು ಆಡುತ್ತಿದ್ದಾರೆ ಆದರೆ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇದು ಪೂರಕವಾಗಲ್ಲ ಇದನ್ನು ಮೊದಲು ವಿದ್ಯಾರ್ಥಿಗಳು ಬಿಡಬೇಕು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಪುನೀತ್ ರಾಜ್ ಕುಮಾರ್ ರವರು ಸುಮಾರು ಇಪ್ಪತ್ತಾರು ಅನಾಥಾಶ್ರಮ ನಲವತ್ತಾರು ಉಚಿತ ಶಾಲೆ ಹದಿನಾರು ವೃದ್ದಾಶ್ರಮ ಹತ್ತೊಂಬತ್ತು ಗೋಶಾಲೆ ಸುಮಾರು ಹದಿನೆಂಟನೂರು ಮಕ್ಕಳ ಉಚಿತ ಶಿಕ್ಷಣ ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹೀಗೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದ ಸ್ಯಾಂಡಲ್ ವುಡ್ ನ ಯುವರತ್ನ ಪುನೀತ್ ರಾಜ್‍ಕುಮಾರ್ ಇಲ್ಲ ಅನ್ನುವುದು ಅರಗಿಸಿ ಕೊಳ್ಳಲು ಆಗುತ್ತಿಲ್ಲ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರಂತಹವರು ಪದೇ ಪದೇ ಕನ್ನಡ ನಾಡಿನಲ್ಲಿ ಜನಿಸಲಿ ಎಂದು ಹೇಳಿದರು.
ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಮಾತನಾಡಿ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ಬಳಿಕ ಗ್ರಾಮೀಣ ಪ್ರದೇಶಗಳಲ್ಲೂ ನೇತ್ರದಾನಕ್ಕೆ ಹೆಚ್ಚಿನ ಜಾಗೃತಿ ಬಂದಿದೆ. ಮರಣದ ನಂತರ ಮಣ್ಣಾಗಿ ಹೋಗುವ ಕಣ್ಣುಗಳನ್ನು ದಾನ ಮಾಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿರುವುದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಹೆಮ್ಮೆ ತರಿಸಿದೆ. ಕಣ್ಣುಗಳಿಂದ ನಾವು ನೋಡಿದ ಪ್ರಪಂಚ, ಕಣ್ಣಿಲ್ಲದೆ ಪ್ರಪಂಚ ಕಾಣದವರು ದಾನ ನೀಡಿದ ಕಣ್ಣುಗಳಿಂದ ಕಾಣಬೇಕು ಎನ್ನುವುದು ನಮ್ಮ ಆಶಯ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನೀಡಿದ ಕಣ್ಣುಗಳಿಂದ ದೇಶದಲ್ಲಿನ ಕುರುಡು ನಿವಾರಣೆ ಆಗಬೇಕು. ಈ ಮೂಲಕ ನೆಚ್ಚಿನ ನಟನ ಹೆಸರು ಅಜರಾಮರ ಆಗಬೇಕು ಎಂದರು.
ಗೆದ್ದ ತಂಡಗಳು: ಪ್ರಥಮ 40000 ರೂ ಹಾಗೂ ಪುನೀತ್ ರಾಜ್‍ಕುಮಾರ್ ಟ್ರೋಫಿ ಯನ್ನು ಶಿವಮೊಗ್ಗದ ಎಕೆ ಲಯನ್ಸ್ ತಂಡ ಮತ್ತು ದ್ವಿತೀಯ ಬಹುಮಾನ 30000 ರೂ ಹಾಗೂ ಪಾರಿತೋಷಕ ರಿಪ್ಪನ್ ಪೇಟೆಯ ಮಾರ್ನಿಂಗ್ ಸ್ಟಾರ್ ತಂಡ ಗೆದ್ದುಕೊಂಡಿತು.
ಈ ಸಂದರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್, ರಿಪ್ಪನ್ ಪೇಟೆ ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್, ಗಣಪತಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ, ಕಟ್ಟೆ ಪ್ರವೀಣ್, ರಮೇಶ್ ಫ಼್ಯಾನ್ಸಿ, ಉಲ್ಲಾಸ್,ಇಲೆವೆನ್ ಸ್ಟಾರ್ ತಂಡದ ಶಂಶುದ್ದೀನ್, ಮೊಹಮ್ಮದ್ ಶಫ಼ಾನ್ ,ಸೋನು ಬ್ಯಾರಿ,ರಿಜ್ವಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.