ರಿಪ್ಪನ್ ಪೇಟೆ : ಕನ್ನಡ ಧ್ವಜ ಸುಟ್ಟುಹಾಕಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ನಾಡಕಛೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ವೇಳೆ ಮಾತನಾಡಿದ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾದ ಅರ್ ಎ ಚಾಬುಸಾಬ್ ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ. ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯವೆನ್ನುವುದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯದ ವಿರುದ್ಧ ರಾಜ್ಯ ಸರಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು ಎಂದರು.
ನಂತರ ಮಾತನಾಡಿದ ಆರ್ ಎನ್ ಮಂಜುನಾಥ್ ಎಂಇಎಸ್ ಮುಖಂಡರನ್ನು ಕೂಡಲೇ ಗಡಿಪಾರು ಮಾಡಬೇಕು,ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಅರಿವಿದ್ದರೂ ಸಹ ಪದೇಪದೇ ಕ್ಯಾತೆ ತೆಗೆಯುತ್ತಿದ್ದಾರೆ ಇಂಥವರಿಗೆ ಹಲವಾರು ಬಾರಿ ತಕ್ಕ ಉತ್ತರ ನೀಡಿದರೂ ಅವರು ಬುದ್ಧಿ ಕಲಿತಿಲ್ಲ ಬೆಳಗಾವಿಯಲ್ಲಿ ಎಂಇಎಸ್ ನವರು ಕನ್ನಡ ಬಾವುಟವನ್ನು ಸುಡುವ ಮೂಲಕ ಮತ್ತೆ ಪುಂಡಾಟಿಕೆ ಮಾಡಿದ್ದಾರೆ ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿರುವುದು ಖಂಡನೀಯ. ಸರಕಾರಕ್ಕೆ ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದರೆ ತಾಯಿ ಸಮಾನವಾದ ನಮ್ಮ ಕನ್ನಡ ಬಾವುಟವನ್ನು ಸುಟ್ಟಿರುವ ಇಂಥವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದರು.
ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್ ಮಾತನಾಡಿ ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಒಂದು ವೇಳೆ; ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ವಿನಾಯಕ ವೃತ್ತದಲ್ಲಿ ಎಂಇಎಸ್ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಬಳಿಕ ಮೆರವಣಿಗೆ ಮೂಲಕ ತೆರಳಿ ನಾಡಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕಸ್ತೂರಿ ಕನ್ನಡ ಸಂಘಟನೆಯ ಎಂ ಎಂ ಪರಮೇಶ್,ಎನ್ ವರ್ತೇಶ್ ,ಹಸನಬ್ಬ,ಶ್ರೀಧರ್ ,ರಮೇಶ್ ಫ಼್ಯಾನ್ಸಿ, ಧನಲಕ್ಷ್ಮಿ , ಸುಗಂಧರಾಜ್,ಪ್ರಕಾಶ್ ಪಾಲೇಕರ್,ಆರ್ ಹೆಚ್ ಮೈದೀನ್,ಆರ್ ಎ ಸುಲೇಮಾನ್, ಕನ್ನಡಪರ ಹೋರಾಟಗಾರ ನಿರಂಜನ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.