ರಿಪ್ಪನ್ ಪೇಟೆ: ಪಟ್ಟಣದ ಹಳೆ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿನಿಯರ ನಿಲಯದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ದೂರಿನ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ ನೀಡಿ ವಿದ್ಯಾರ್ಥಿಗಳ ತೊಂದರೆಗಳನ್ನು ಕುಂದುಕೊರತೆಗಳನ್ನು ಆಲಿಸಿದರು.
ಮಾಜಿ ಶಾಸಕರು ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡುತ್ತಿದ್ದಂತೆ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಹಾಗೂ ಕಳಪೆ ಆಹಾರದ ಬಗ್ಗೆ ಅಡುಗೆ ತಯಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ಮಾಜಿ ಶಾಸಕರು ವಾರ್ಡನ್ ಹಾಗೂ ಅಡುಗೆ ತಯಾರಕರ ವಿರುದ್ಧ ಜಿಲ್ಲಾ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹತ್ತು ದಿನಗಳ ಒಳಗೆ ವಾರ್ಡನ್ ರನ್ನು ಬದಲಾಯಿಸುವಂತೆ ಹಾಗೂ ಅಡುಗೆ ತಯಾರಕರು ವಿದ್ಯಾರ್ಥಿಗಳೊಂದಿಗೆ ಸೌಮ್ಯವಾಗಿ ವರ್ತಿಸಬೇಕು ಹಾಗೂ ಇಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಾಕೀತು ಮಾಡಿದರು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು.
ವರದಿ : ಎಸ್ ಎಂ ಆರ್