ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿಯ ನಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳು ಬೆಳ್ಳಂಬೆಳಿಗ್ಗೆನೇ ಹಾಸ್ಟೆಲ್ ನಿಂದ ಹೊರ ಬಂದು ಎಡೆಹಳ್ಳಿಯ ಗಣಪತಿ ದೇವಸ್ಥಾನದ ಹತ್ತಿರ ಪ್ರತಿಭಟನೆ ನಡೆಸುತ್ತಿದ್ದರು.
ಹಾಸ್ಟೆಲ್ ನ ಪ್ರಿನ್ಸಿಪಾಲ್ ಬಿ ಕೆ ಚಂದ್ರಪ್ಪ ಹಾಗೂ ಕೆಲ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದು ಬೂಟುಕಾಲಿನಿಂದ ಒದ್ದು ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಹಾಗೂ ಊಟದಲ್ಲಿ ಹುಳ ಯುಕ್ತ ಆಹಾರವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದು ಕೇಳಿದರೆ ವಿದ್ಯಾರ್ಥಿಗಳಿಗೆ ಹೀನಾಮಾನ ಬೈದು ಇಲ್ಲಿಂದ ನಿಮಗೆ ಟಿಸಿ ಕೊಟ್ಟು ಕಳುಹಿಸುತ್ತೇನೆ ನಾವು ಹೇಳಿದ ಹಾಗೆ ಕೇಳುವುದಾದರೆ ಇರಿ ಇಲ್ಲದಿದ್ದರೆ ನಡೆಯಿರಿ ಎಂದು ಇದೀಗ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ಹೊರ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಯಾವುದೇ ವ್ಯವಸ್ಥೆಯೂ ಸಹ ಸರಿಯಿಲ್ಲ ಪ್ರಿನ್ಸಿಪಾಲ್ ರನ್ನು ತಕ್ಷಣ ಅಮಾನತ್ತು ಮಾಡಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಬೆಳಿಗ್ಗೆ ಸಾಗರದ ಶಾಸಕರಾದ ಹರತಾಳು ಹಾಲಪ್ಪನವರು ಆಗಮಿಸಿ ವಿದ್ಯಾರ್ಥಿಗಳ ಅಳಲನ್ನು ಕೇಳಿ ಪ್ರಿನ್ಸಿಪಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶಿಸಿ ಕಾರ್ಯನಿಮಿತ್ತ ತೆರಳಿದ್ದರು.
ನಂತರ ಸ್ಥಳಕ್ಕಾಗಮಿಸಿದ ಸಾಗರ ಉಪವಿಭಾಗಧಿಕಾರಿಗಳಾದ ನಾಗರಾಜ್,ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಡೆಪ್ಯೂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿ ಕೂಡಲೇ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿ ಕೆಳದಿ ಮೊರಾರ್ಜಿ ದೇಸಾಯಿ ಶಾಲೆಯ ರಮೇಶ್ ರವರನ್ನು ಪ್ರಭಾರಿಯಾಗಿ ನೇಮಿಸಿ ಆದೇಶ ಹೊರಡಿಸಿದರು.
:: ಪ್ರಿನ್ಸಿಪಲ್ ಎತ್ತಂಗಡಿ ಆದೇಶ ಪ್ರತಿ ಕೈಗೆ ಸಿಗುವವರೆಗೂ ಧರಣಿ ಸ್ಥಳದಲ್ಲೇ ಕುಳಿತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ::
ಸಾಗರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಪ್ರಿನ್ಸಿಪಲ್ ಎತ್ತಂಗಡಿ ಆದೇಶ ಪ್ರತಿ ಸಿಗುವವರೆಗೂ ಜೊತೆಗಿದ್ದು ರಸ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ನಿಮ್ಮೊಡನೆ ನಾನಿದ್ದೇನೆ ಎಂದು ವಿದ್ಯಾರ್ಥಿಗಳ ಜೊತೆಗೆ ಕೊನೆಯವರೆಗೂ ಇದ್ದು ವಿದ್ಯಾರ್ಥಿಗಳ ಹೋರಾಟಕ್ಕೆ ಆಸರೆಯಾದರು.
ವಿದ್ಯಾರ್ಥಿಗಳ ವಿಚಾರದಲ್ಲಿ ಯಾವುದೇ ರೀತಿಯಾದ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ಮೊರಾರ್ಜಿ ಶಾಲೆಗೆ ಭೇಟಿ ನೀಡುತ್ತಿರುತ್ತೇನೆ ಎಂದು ಭರವಸೆ ಕೊಟ್ಟ ಮೇಲೆ ವಿಧ್ಯಾರ್ಥಿಗಳು ಪೋಷಕರು ನಿರಾಳರಾದರು.
ಒಟ್ಟಾರೆಯಾಗಿ ಬೆಳ್ಳಂಬೆಳಗ್ಗೆಯಿಂದ ಪ್ರಾರಂಭವಾಗಿದ್ದ ವಿದ್ಯಾರ್ಥಿಗಳ ಹೋರಾಟ ಮಧ್ಯಾಹ್ನದ ಹೊತ್ತಿಗೆ ಸೂಕ್ತ ಭರವಸೆಯೊಂದಿಗೆ ಮುಕ್ತಾಯವಾಗಿದೆ.ವಿದ್ಯಾರ್ಥಿ ಸಮೂಹ ಎದ್ದು ನಿಂತರೆ ಏನಾನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ಇರುವಕ್ಕಿಯ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳೇ ಸಾಕ್ಷಿಯಾದರು.
ವರದಿ : ಪವನ್ ಕುಮಾರ್ ಕಠಾರೆ.