ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಸಡಗರ: ಭೂ ತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

ಶಿವಮೊಗ್ಗ: ಜಿಲ್ಲೆಯಲ್ಲಿ ಅನ್ನದಾತರು ಭೂಮಿ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜಿಲ್ಲೆಯ ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ ತಾಲೂಕಿನಲ್ಲಿ ಈ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತೆ.

ಭೂಮಿ ಹುಣ್ಣಿಮೆ ಮಲೆನಾಡಿನ ಹಳ್ಳಿಗರಿಗೆ ವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟ ಹೊಂದಿರುವವರಿಗೆ ಈ ದಿನ ಹೊಸ ಸಡಗರ. ನಸುಕಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ. ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತರುವ ಅನ್ನದಾತರು ಅದನ್ನು ಬೇಯಿಸುತ್ತಾರೆ. ಇದರ ಮಿಶ್ರಣಕ್ಕೆ ‘ಚರಗ’ ಎನ್ನುತ್ತಾರೆ. ಈ ಮಿಶ್ರಣವನ್ನು ಗದ್ದೆಗೆ ಬಿತ್ತಿ ಒಳ್ಳೆಯ ಫಸಲು ಬರಲಿ ಎಂದು ಪ್ರಾರ್ಥಿಸುತ್ತಾರೆ. ಈ ವಿಧಾನಗಳೆಲ್ಲ ಮುಗಿದ ಮೇಲೆ ಹೊಲದಲ್ಲೆ ಕುಳಿತು ಎಲ್ಲರೂ ಊಟ ಮಾಡುತ್ತಾರೆ.

ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈತುಂಬಿಕೊಂಡಿರುತ್ತಾಳೆ. ಹೀಗಾಗಿ, ರೈತರು ಭೂ ತಾಯಿಯನ್ನು ಗರ್ಭಿಣಿ ಸ್ಥಾನದಲ್ಲಿಟ್ಟು, ಆಕೆಗೆ ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ.

:::ಹೊಸನಗರ ತಾಲೂಕಿನಲ್ಲಿ ಸಡಗರದ ಭೂಮಿಹುಣ್ಣಿಮೆ:::
ಹೊಸನಗರ ತಾಲೂಕಿನ ಸುತ್ತಲಿನ ಹಲವು ಗ್ರಾಮಗಳಲ್ಲಿರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಂಭ್ರಮದಿಂದ ಆಚರಿಸಿದರು. ರೈತರು ಖುಷಿ ಖುಷಿಯಿಂದಲೇ ಭೂದೇವಿಯ ಆರಾಧನೆಯಲ್ಲಿನಿರತವಾಗಿದ್ದು ವಿಶೇಷವಾಗಿ ಗಮನ ಸೆಳೆಯಿತು.
ವಿಜಯದಶಮಿಯ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ5 ಬಗೆಯ ಕಾಳು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿಚೆಲ್ಲುವ ಸಂಪ್ರದಾಯವಿದೆ. ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮೃದ್ಧವಾಗಿರಲಿದೆ ಎನ್ನುವ ನಂಬಿಕೆ ಜನಪದದಲ್ಲಿದೆ.

 ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ ರೈತರು ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿತೇಲಿದರು.

Leave a Reply

Your email address will not be published. Required fields are marked *