ಕುಮಾರಸ್ವಾಮಿ ನಾಲ್ಕು ದಿನ ಆರ್​​ಎಸ್​​​ಎಸ್​​ ಶಾಖೆಗೆ ಬಂದು ಆಮೇಲೆ ಟೀಕಿಸಲಿ: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಒಂದು ವಾರ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಆಹ್ವಾನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಸಂಘ- ಸಂಸ್ಥೆಯನ್ನು ಟೀಕೆ ಮಾಡುವ ಮುನ್ನ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕುಮಾರಸ್ವಾಮಿ ನಾಲ್ಕು ದಿನ ಶಾಖೆಗೆ ಬರಲಿ, ಆಮೇಲೆ ಸಂಘದ ಬಗ್ಗೆ ಟೀಕೆ ಮಾಡಲಿ. ಅವರು ಅಧಿಕಾರದಲ್ಲಿದ್ದಾಗ ಅವರ ಕುಟುಂಬದವರಿಗೆ ಸಹಾಯ ಮಾಡಿಕೊಂಡು ಬಂದವರು. ಅವರಿಗೆ ರಾಷ್ಟ್ರಭಕ್ತಿ, ದೇಶದ ಪರಿಕಲ್ಪನೆ, ಚಿಂತನೆಗಳಿಲ್ಲ. ಪಾರ್ಟಿಯನ್ನೇ ಕುಟುಂಬ ರಾಜಕಾರಣಕ್ಕೆ ತಂದವರು, ಅವರಿಗೆ ಆರ್​ಎಸ್​ಎಸ್ ವಿಚಾರಧಾರೆಗಳೇನು ಅಂತ ತಿಳಿದಿಲ್ಲ. ಸಂಘ ಇಂದು ಸಂಸ್ಕಾರ, ದೇಶಭಕ್ತಿ ಸಾರುವ ಕೆಲಸ ಮಾಡುತ್ತಿದೆ ಎಂದು ಕಟೀಲ್ ಹೇಳಿದರು.
ಸಂಘ ವ್ಯಕ್ತಿ ನಿರ್ಮಾಣದ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಇವತ್ತು ರಾಷ್ಟ್ರಪತಿ, ಪ್ರಧಾನಮಂತ್ರಿ ಇಬ್ಬರೂ ಸ್ವಯಂಸೇವಕರೇ. ಜನತಾದಳದಲ್ಲೂ ಸ್ವಯಂಸೇವಕರಿದ್ದಾರೆ. ಕಾಂಗ್ರೆಸ್​​​ನಲ್ಲೂ ಸಹ ಸ್ವಯಂ ಸೇವಕರಿದ್ದಾರೆ. ಇಂದು ಸಂಘ ಪ್ರವೇಶ ಮಾಡದ ಜಾಗವಿಲ್ಲ. ಅಧಿಕಾರಿಗಳನ್ನು ನಿರ್ಮಾಣ ಮಾಡಲು ಸಂಘ ಗುರಿ ಇಟ್ಟುಕೊಂಡಿಲ್ಲ, ಸಂಘ ರಾಷ್ಟ್ರ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿದೆ ಎಂದರು.

Leave a Reply

Your email address will not be published. Required fields are marked *