ಶಿವಮೊಗ್ಗ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಕನ್ನಡದ ವಿಶೇಷ ಮೂರು ಗೀತೆಗಳನ್ನು ಹಾಡಿದ್ದು, ಇತಿಹಾಸ ಸೃಷ್ಟಿಸಿದ ದಿನವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಎಂದು ನಡೆದ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ಈ ದಿನವನ್ನು ನೆನಪಿಟ್ಟುಕೊಳ್ಳಬೇಕು. ಈ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ 5 ಲಕ್ಷ ಜನರು ಏಕ ಕಾಲದಲ್ಲಿ ಕನ್ನಡದ ವಿಶೇಷ ಗೀತೆಯನ್ನು ಸಾಮೂಹಿಕವಾಗಿ ಹಾಡಿರುವುದು ಇತಿಹಾಸ ಸೃಷ್ಟಿಸಿದ ದಿನವಾಗಿದೆ ಎಂದರು.
ಬರುವಂತಹ ಎಲ್ಲ ದಿನವನ್ನು ಕನ್ನಡ ಅಭಿವೃದ್ದಿಗೆ ಶ್ರಮ ಹಾಕೋಣ. ಅದರ ಮೂಲಕ ಕರ್ನಾಟಕವನ್ನು ಎಲ್ಲ ಕ್ಷೇತ್ರದಲ್ಲೂ ಮೊದಲನೆ ಸ್ಥಾನಕ್ಕೆ ತೆಗೆದುಕೊಂಡು ಹೋಗೋಣ. ಇಂದು ಹಾಡಿದಂತೆ ಒಟ್ಟಾಗಿ ಇರೋಣ ಎಂದು ಶುಭ ಹಾರೈಸಿದರು.
*ಅಣ್ಣಾವ್ರಾ ಧ್ವನಿಯೇ ಬರಬೇಕಾಯಿತು*
ಇಂದು ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ನಡೆದ ಲಕ್ಷ ಕಂಠ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಮೊದಲ ಎರಡು ಗೀತೆಯನ್ನು ಚೆನ್ನಾಗಿಯೇ ಹಾಡಲಾಯಿತು. ಆದರೆ, ಕೊನೆಯ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಯನ್ನು ಮೊದಲು ಸರಿಯಾಗಿ ಹಾಡಲಿಲ್ಲ. ನಂತರ ಡಾ. ರಾಜ್ ಕುಮಾರ್ ಅವರ ಹಾಡನ್ನು ಹಾಕಲಾಯಿತು. ಆಗ ಎಲ್ಲರೂ ಸರಿಯಾಗಿ ಗಾಯನ ಮಾಡಿದರು. ಈ ವೇಳೆ, ಕನ್ನಡ ನಾಡು ನುಡಿಯ ಪ್ರತಿಜ್ಞಾವಿಧಿ ಸಂಕಲ್ಪ ಸ್ವೀಕರಿಸಲಾಯಿತು.