ಸಾಗರ: ಇಲ್ಲಿನ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಜೀವತೆತ್ತ ಯುವಕರು.
ಸಂತೋಷ್ ಮತ್ತು ಹನುಮಂತ ಅವರು ಸೆ. 24ರ ತಡರಾತ್ರಿ ಲಾಡ್ಜ್‌ಗೆ ಬಂದು ಡಬ್ಬಲ್ ಬೆಡ್‌ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ 8-30ಕ್ಕೆ ರೂಮ್‌ಬಾಯ್ ಊಟ ಬೇಕೆಂದು ಕೇಳಲು ಬಾಗಿಲು ಬಡಿದಾಗಲೂ ಇಬ್ಬರೂ ಹೊರಗೆ ಬಂದಿರಲಿಲ್ಲ. ರೂಮ್‌ಬಾಯ್ ಇಬ್ಬರೂ ಮಲಗಿರಬೇಕು ಎಂದು ವಾಪಾಸ್ ಹೋಗಿದ್ದನು.
ಭಾನುವಾರ ಬೆಳಿಗ್ಗೆ ರೂಮಿನ ಬಾಗಿಲು ಸಾಕಷ್ಟು ಬಾರಿ ಬಡಿದಾಗಲೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ರೂಮಿನ ಸೀಲಿಂಗ್‌ಗೆ ಅಳವಡಿಸಿದ್ದ ಎರಡು ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.