ಶಿಕ್ಷಕರು ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ : ಬಿ ಕೆ ಸಂಗಮೇಶ್

ಭದ್ರಾವತಿ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರು ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ. ಅಮೂಲ್ಯ ಸೇವೆಸಲ್ಲಿಸುತ್ತಿರುವ ಶಿಕ್ಷಕರೇ ಸಮಾಜದ ನಿಜವಾದ ಸಂಪತ್ತು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.

ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿಂದು ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗು ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  

ತಂದೆ-ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಜ್ಞಾನ ನೀಡುವ ಪ್ರತ್ಯಕ್ಷ ದೇವರುಗಳಾಗಿದ್ದಾರೆ. ಜ್ಞಾನ ಸಂಪತ್ತು ಎಂಬುದು ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತು ಅಲ್ಲ. ಬದಲಾಗಿ ಶ್ರದ್ಧೆ, ಶ್ರಮದಿಂದ ಪಡೆಯುವುದಾಗಿದೆ ಎಂದರು.

ಸಮಾಜ ಸುಧಾರಣೆಯಲ್ಲಿ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದ್ದು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶಿಕ್ಷಕರು ಎಂದಿಗೂ ಅಮರ. ತಮ್ಮ ಜವಾಬ್ದಾರಿಗಳನ್ನು ಅರಿತು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹಾದಿಯಲ್ಲಿ ಎಲ್ಲರೂ ಸಾಗಿ ಶಿಕ್ಷಕ ವೃತ್ತಿಯ ಘನತೆ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾ ಹಣಾಧಿಕಾರಿ ರಮೇಶ್, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನಗರಸಭಾ ಸದಸ್ಯರಾದ ಸರ್ವಮಂಗಳ, ರಿಯಾಜ್ ಅಹ್ಮದ್, ಮುಖಂಡರಾದ ಎಸ್.ಎಸ್ ಭೈರಪ್ಪ,  ಶಿಕ್ಷಕರಾದ ಹರಿಬಾಬು, ಎಂ.ಎಸ್ ಬಸವರಾಜ್, ಎಸ್.ಪಿ ಮೋಹನ್, ಹನುಮಂತು, ಸುಮತಿ ಕಾರಂತ್, ಎಂ.ಸಿ ಆನಂದ್, ಸಿ. ಜಯಪ್ಪ, ನಗರಸಭೆ ಪರಿಸರ ಇಂಜಿನಿಯರ್ ಪ್ರಭಾಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *