ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಎದುರು ಅವರದ್ದೇ ಪಕ್ಷದ ಎಂಎಲ್ ಸಿ ಆಯನೂರ್ ಮಂಜುನಾಥ್ ಅಸಮಾಧಾನ ಹೊರಹಾಕಿದ ಘಟನೆ ಇಂದು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಕೋವಿಡ್ ಮತ್ತು ಪ್ರವಾಹ ಸಂಬಂದಿಸಿದ ಸಭೆಯಲ್ಲಿ ನಡೆದಿದೆ.
ಘಟನೆಗೆ ಕಾರಣ ಏನು?
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ತಾಲೂಕ್ ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಮತ್ತು ಪ್ರವಾಹ ಸಂಬಂದಿಸಿದ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಆಯನೂರ್ ಮಂಜುನಾಥ್ ತಮ್ಮ ಅಸಮಾಧಾನ ಹೊರ ಹಾಕಿದರು.. ನಮಗೇನು ಗೌರವ ಇಲ್ವಾ..? ಬನ್ನಿ ಪ್ರಸನ್ನಕುಮಾರ್, ಅಧಿಕಾರಿಗಳು ಏನು ಮಷ್ಕಿರಿ ಮಾಡ್ತೀರಾ… ನಮಗೆ ಗೌರವ ಇಲ್ಲದ ಕಡೆ ಇರೋಲ್ಲ.. ನಾವು ಅಂತ ಅಧಿಕಾರಿಗಳಿಗೆ ಬೆಲೆ ಕೊಡಲ್ಲ ಎಂದರು. ಯಾರಿಗಾದರೂ ಅನುದಾನ, ಪರಿಹಾರ ಧನ ಕೊಟ್ಟರೆ ಮಾಹಿತಿ ನೀಡೋದಿಲ್ಲ.. ಯಾವ ಸಭೆಗೂ ಅಹ್ವಾನ ನೀಡೋದಿಲ್ಲ ಇವರಿಗೆ ಯಾವ ರೀತಿ ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಭೆ ಸಮಾರಂಭಗಳಲ್ಲಿ ಶಾಸಕರಿಗೆ ನೀಡುವಷ್ಟೇ ಗೌರವ ಮರ್ಯಾದೆ ಮತ್ತು ಸ್ಥಾನಮಾನಗಳನ್ನು ವಿಧಾನ ಪರಿಷತ್ ಸದಸ್ಯರಿಗೂ ನೀಡಬೇಕೆಂದು ಸರ್ಕಾರದ ಪ್ರೋಟೋಕಾಲ್ ನಿಯಮ ಇರುತ್ತದೆ .ಆದರೆ ಕೆಲವು ವರ್ಷಗಳಿಂದ ಸರ್ಕಾರಿ ಸಭೆ ಕಾರ್ಯಕ್ರಮಗಳಲ್ಲಿ ವಿಧಾನಪರಿಷತ್ ಸದಸ್ಯರಿಗೆ ಪ್ರೋಟೋಕಾಲ್ ಪ್ರಕಾರ ಗೌರವ ನೀಡದೆ ಆಹ್ವಾನಿಸದೆ ಮತ್ತು ಶಿಷ್ಟಾಚಾರದ ಪ್ರಕಾರ ಶಿವಮೊಗ್ಗ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನಿಸುತ್ತಿಲ್ಲ ಎಂದು ಕಳೆದ 2 ವರ್ಷಗಳ ಹಿಂದೆಯೇ ಮಾಜಿ ಲೋಕಸಭಾ ಸದಸ್ಯ ,ಮಾಜಿ ರಾಜ್ಯಸಭಾ ಸದಸ್ಯ ,ಮಾಜಿ ಶಾಸಕ, ಹಾಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ರವರು ಈ ಹಿಂದೆ ಸರ್ಕಾರದಲ್ಲಿ ಈ ಬಗ್ಗೆ ಪ್ರಸ್ತಾವನೆ ಹಾಗೂ ದೂರನ್ನು ಸಲ್ಲಿಸಿದ್ದರು .ಆದರೆ ಸರ್ಕಾರದ ಅಧಿಕಾರಿಗಳು ಇದಕ್ಕೆ ಕ್ಯಾರೆ ಎಂದಿರಲಿಲ್ಲ .ಈ ಹಿಂದೆ ಈ ಬಗ್ಗೆ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಕಿಮ್ಮನೆ ರತ್ನಾಕರ್ ರವರು ಸಹ ಶಾಸಕರಿಗೆ ಸಭೆ ಸಮಾರಂಭಗಳಲ್ಲಿ ಗೌರವಿಸುತ್ತಿಲ್ಲ ಪ್ರೋಟೋಕಾಲ್ ಪಾಲಿಸುತ್ತಿಲ್ಲ ಎಂದು ದೂರು ಸಹ ನೀಡಿದ್ದರು .
ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ .ಕೆ. ಎಸ್. ಈಶ್ವರಪ್ಪ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ರವರು ಈ ಬಗ್ಗೆ ಮತ್ತು ಅಧಿಕಾರಿಗಳ ಧೋರಣೆಯ ಬಗ್ಗೆ ಕೆಂಡಾಮಂಡಲವಾಗಿ ,ಇನ್ನಿಬ್ಬರು ಸದಸ್ಯರು ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ ಹಾಗೂ ಪ್ರಸನ್ನ ಕುಮಾರ್ ರವರೊಂದಿಗೆ ಸಭೆಯಿಂದ ಹೊರನಡೆದು ಬಹಿಷ್ಕಾರ ಮಾಡುವ ಮಟ್ಟಕ್ಕೆ ಹೋಗಿದ್ದರು .ಅಷ್ಟರಲ್ಲಿ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಆಶ್ವಾಸನೆ ನೀಡಿರುವ ಕಾರಣ ಸಭೆಯಲ್ಲಿ ಭಾಗವಹಿಸಲು ಒಪ್ಪಿ ಸಭೆ ನಡೆಸಲು ನಡೆಯಲು ಅವಕಾಶ ಮಾಡಿಕೊಟ್ಟು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ವಿಶೇಷ ಪ್ರಕರಣವೊಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲೇ ನಡೆಯಿತು.
ವರದಿ: ರಾಮನಾಥ್