ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ,ವೃತ್ತಿ ಕೌಶಲ್ಯ ಅಭಿವೃದ್ದಿಗೆ ವಿಫುಲ ಅವಕಾಶ,ಮೂಲಭೂತ ಸೌಕರ್ಯ ಒದಗಿಸಲು ಬದ್ದ:ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಶಿವಮೊಗ್ಗ : ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ, ಸಂಪರ್ಕ ಸಂವಹನ ಹಾಗೂ ವೃತ್ತಿ ಕೌಶಲ್ಯ ಅಭಿವೃದ್ದಿಗೆ ವಿಫುಲ ಅವಕಾಶವಿದ್ದು, ಇದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದರಾಗಿದ್ದೇವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಕೋವಿಡ್ ನಂತರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಪರ್ಕದಿಂದ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗವಕಾಶದ ಸಾಧ್ಯತೆಗಳು ತೆರೆದಿದ್ದು, ಇದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಗತ್ಯವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ರಾಜ್ಯದಲ್ಲಿ ಉದ್ಯೋಗ ಅವಕಾಶಗಳು ಬೆಂಗಳೂರು ಕೇಂದ್ರಿತವಾಗಿದ್ದು, ತೀವ್ರ ಒತ್ತಡವಿದೆ. ಇದನ್ನು ರಾಜ್ಯಾದಾದ್ಯಂತ ಇತರೆ ಜಿಲ್ಲೆಗಳಿಗೂ ವಿಕೇಂದ್ರೀಕರಣಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಕೋವಿಡ್ ಪರಿಣಾಮ ವರ್ಕ್ ಫ್ರಂ ಹೋಂ ನಡೆಯುತ್ತಿರುವುದರಿಂದ ಸಮರ್ಪಕ ಸಂವಹನ ಸಂಪರ್ಕಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದಲ್ಲಿ ರಾಜ್ಯದ ಅಭಿವೃದ್ದಿಗೆ ಪೂರಕವಾಗಲಿದೆ . ದೇಶದಲ್ಲಿ ಎರಡು ಮಾರ್ಗಗಳಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳನ್ನು ನಾವು ನೋಡುತ್ತಿದ್ದೇವೆ. ಉನ್ನತ ಶಿಕ್ಷಣ ಮತ್ತು ವೃತ್ತಿ ಕೌಶಲ್ಯದ ಸಮಾನಾಂತರ ಮಾರ್ಗಗಳಲ್ಲಿ ಕಾಣಬಹುದಾಗಿದೆ. ಸಣ್ಣ ಕೈಗಾರಿಕೆ ಮತ್ತು ಕುಶಲ ಕೈಗಾರಿಕೆಗಳಿಗೆ ಸೂಕ್ತ ತರಬೇತಿ ನೀಡುವುದಲ್ಲದೆ. ಬ್ಯಾಂಕ್ ಮೂಲಕ ಆರ್ಥಿಕ ನೆರವು ದೊರಕಿಸಿಕೊಡುವ ಬಗ್ಗೆಯೂ ಯೋಜನೆಯನ್ನು ಪುನರ್ ರೂಪಿಸಲಾಗುವುದು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.

ರಾಜ್ಯದಾದ್ಯಂತ ಡಿಜಿಟಲ್ ಸಂವಹನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ರಾಜ್ಯದ 6 ಲಕ್ಷ ಹಳ್ಳಿಗಳಲ್ಲಿ ಇಂಟರ್‍ನೆಟ್ ಡಿಜಿಟಲ್ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಯ ಒಂದು ಹಳ್ಳಿಯನ್ನು ಫೈಲಟ್ ಪ್ರಾಜೆಕ್ಟ್ ಅಗಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ 6 ಲಕ್ಷ ಹಳ್ಳಿಗಳಿಗೂ ಡಿಜಿಟಲ್ ಸಂವಹನ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಪುತ್ತೂರಿನ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.


ವರದಿ : ನಾಗಕಿರಣ್ ಶೆಟ್ಟಿ ಶಿವಮೊಗ್ಗ

Leave a Reply

Your email address will not be published. Required fields are marked *