ಅನಗತ್ಯ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ವಿರೋಧ :

ರಿಪ್ಪನ್ ಪೇಟೆ : ಇಲ್ಲಿಯ ಗ್ರಾಮ ಪಂಚಾಯಿತಿ ಮುಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಈ ಹಿಂದೆ ವಿಶ್ವ ಯೋಜನೆಯನ್ವಯ ಮಾಡಿರುವ ಚಪ್ಪಡಿ ಕಲ್ಲಿನಲ್ಲಿ ನಿರ್ಮಾಣಗೊಂಡ ಭದ್ರವಾದ ಚರಂಡಿಯನ್ನು ತೆಗೆದು ಹೊಸ ಬಾಕ್ಸ್ ಚರಂಡಿ ಮಾಡಲು ಹೊರಟಿರುವ ಗ್ರಾಮ ಪಂಚಾಯಿತಿ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ. ಆರ್ .ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಧರಣಿ ನಡೆಸಿದರು.

 ಹಿಂದಿನ ಗ್ರಾಮಪಂಚಾಯಿತಿ ಅವಧಿಯಲ್ಲಿ ಅಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಈಗ ಹಾಲಿ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ  ಮಹಾಲಕ್ಷ್ಮಿ ಅಣ್ಣಪ್ಪ ಇವರು ತಮ್ಮ ವಿವೇಚನಾ ಕೋಟದಲ್ಲಿ 15ನೇ ಹಣಕಾಸು ಅನುದಾನದಲ್ಲಿ ಬರುವೆ ಗ್ರಾಮದ ಒಂದನೇ ವಾರ್ಡಿನ ತಮ್ಮ ಮನೆಯ ಮುಂದಿನ ರಸ್ತೆಗೆ ಒಂದು ಲಕ್ಷ ರೂಪಾಯಿಯನ್ನು ಸಿಮೆಂಟಿನ ಬಾಕ್ಸ್ ಚರಂಡಿ ನಿರ್ಮಿಸಲು  ಇರಿಸಿದ್ದರು.

ಈ ಕಾಮಗಾರಿ ನಡೆಸಲು ಗುತ್ತಿಗೆದಾರರಾದ ನಾಗರಾಜ್ ಮುಖಾಂತರ ನಿನ್ನೆ ಕೆಲಸ ಪ್ರಾರಂಭ ಮಾಡಲು ಹೂಳು ತುಂಬಿದ ಮಣ್ಣನ್ನು ತೆಗೆದು, ಗಟ್ಟಿಮುಟ್ಟಾದ ಹಳೆಯ ಚಪ್ಪಡಿ ಚರಂಡಿಯನ್ನು ಅಗೆಯುತ್ತಿದ್ದಾಗ ತಕ್ಷಣವೇ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಹೋದ ಸಾಮಾಜಿಕ ಹೋರಾಟಗಾರ ಟಿ. ಆರ್. ಕೃಷ್ಣಪ್ಪ ಗಟ್ಟಿಮುಟ್ಟಾದ ಚರಂಡಿ ಇರುವಾಗ  ಸರ್ಕಾರದ ಹಣ ದುರುಪಯೋಗ ಮಾಡಲು ಈ ರೀತಿ ಕಾಮಗಾರಿ ಮಾಡುವುದನ್ನು ವಿರೋಧಿಸಿದರು. 

ಈ ಹಣವನ್ನು ಗ್ರಾಮದ ಬೇರೆ ರಸ್ತೆಗೆ ಬಳಸಿದರೆ ಉಪಯೋಗವಾಗುತ್ತದೆ.ಆದರೆ ಗಟ್ಟಿಮುಟ್ಟಾದ ಕಲ್ಲಿನ ಚಪ್ಪಡಿ ಚರಂಡಿಯನ್ನು ತೆಗೆದು ಸಿಮೆಂಟಿನ ಬಾಕ್ಸ್ ಚರಂಡಿ ನಿರ್ಮಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಹಾಗೂ ಅನಗತ್ಯ ದುಂದುವೆಚ್ಚ ದ ಬಗ್ಗೆ ಹೊಸನಗರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ  ದೂರು ನೀಡಿದ್ದಾರೆ. ಈ ಹಿಂದೆ ಈ ರೀತಿಯ ಚರಂಡಿಯನ್ನು ತೆಗೆದು ಅನೇಕ ಬಾಕ್ಸ್ ಚರಂಡಿ ಮಾಡಲಾಗಿದೆ. ಆದರೆ ಹಳೆ ಚರಂಡಿಯಿಂದ ತೆಗೆಯಲಾದ ಲಕ್ಷಾಂತರ ರೂಪಾಯಿ ಚಪ್ಪಡಿ ಕಲ್ಲುಗಳು ಸಾರ್ವಜನಿಕರ ಬಟ್ಟೆ ಒಗೆಯುವ ಕಲ್ಲು ಹಾಗೂ ಮನೆ ಬೇಲಿ ದಾಟುವ ಕಲ್ಲಾಗಿ ಮಾರ್ಪಾಟಾಗಿದೆ.ಇನ್ನೂ ಕೆಲವು ಕಲ್ಲುಗಳು ಕಂಟ್ರಾಕ್ಟರುಗಳ ಗೋಡನ್ ಗೆ  ಸೇರಿದೆ. ಈ ಹಳೆ ಚರಂಡಿಯ ಕಲ್ಲುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿಯಾಗಿಲ್ಲ. ಅಲ್ಲದೆ ಹೊಸ ಚರಂಡಿ ನಿರ್ಮಾಣಕ್ಕಾಗಿ ಗಟ್ಟಿಮುಟ್ಟಾದ ಹಳೆ ಚರಂಡಿ  ತೆಗೆಯುವುದರ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ ಎಂದರು.

.               ಟಿ ಆರ್ ಕೃಷ್ಣಪ್ಪ ಸಾಮಾಜಿಕ ಹೋರಾಟಗಾರರು



 ಎಷ್ಟೋ ಕಡೆ ಹೊಸ ಚರಂಡಿಯ ತುರ್ತು ಅಗತ್ಯವಿದ್ದರೂ  ಆ ಬಗ್ಗೆ ಯೋಚಿಸದೆ ಈ ರೀತಿಯ ಕಾಮಗಾರಿಗೆ ಹಣ ವಿನಿಯೋಗಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ.



ವರದಿ: ರಾಮನಾಥ್

Leave a Reply

Your email address will not be published. Required fields are marked *