ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಗುರುವಾರ ನೇಮಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕಾತಿ ಪತ್ರವನ್ನು ತಮಿಳುನಾಡು ಬಿಜೆಪಿಗೆ ರವಾನಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಬುಧವಾರ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಕೇಂದ್ರ ಸಚಿವಾಲಯದ ರಾಜ್ಯ ಸಚಿವರನ್ನಾಗಿ ನೇಮಿಸಿತ್ತು. ಅವರಿಗೆ ಮಾಹಿತಿ ಮತ್ತು ಪ್ರಸಾರ, ಮತ್ತು ಮೀನುಗಾರಿಕೆ, ಪಶುಸಂಗೋಪನಾ ಸಚಿವಾಲಯವನ್ನು ನೀಡಲಾಗಿದೆ.
ಎಲ್. ಮುರುಗನ್ ಅವರ ಸ್ಥಾನಕ್ಕೆ ಹಾಲಿ ಶಾಸಕ ನೈನಾರ್ ನಾಗೇಂದ್ರನ್ ಅಥವಾ ಅಣ್ಣಾಮಲೈ ಅವರನ್ನು ನೇಮಿಸುವ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಅಣ್ಣಾ ಮಲೈ ಅವರು 2020 ರ ಆಗಸ್ಟ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಕರೂರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋಲನುಭವಿಸಿದ್ದರು. ಅವರ ವಿರುದ್ದ ಸ್ಪರ್ಧಿಸಿದ್ದ ಡಿಎಂಕೆಯ ಮೊಂಜನೂರು ಎಲಂಗೋ ಅವರು 24,816 ಓಟುಗಳ ಅಂತರದಲ್ಲಿ ಜಯಗಳಿಸಿದ್ದರು.