ರಿಪ್ಪನ್ ಪೇಟೆ:: ಇಲ್ಲಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಪಟ್ಟಣದಿಂದ ಹೊರಗಿದ್ದ ಬಾರ್ ಗಳನ್ನು ಏಕಾಏಕಿ ವಿನಾಯಕ ವೃತ್ತದ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ತೆರೆದಿದ್ದು ಹಾಗೂ ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಬಾರ್ ಅನ್ನು ತೆರೆಯಲು ಕಾಮಗಾರಿ ನೆಡೆಸುತ್ತಿದ್ದು. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ರಿಪ್ಪನ್ ಪೇಟೆ ಸಾರ್ವಜನಿಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಹರತಾಳು ಹಾಲಪ್ಪ ನವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಅಬಕಾರಿ ಜಿಲ್ಲಾಧಿಕಾರಿ ಮತ್ತು ತಾಲೂಕು ಅಬಕಾರಿ ಇನ್ಸ್ ಪೆಕ್ಟರ್ ಜೊತೆ ಮಾಹಿತಿ ಕೇಳಿದಾಗ ಕಾನೂನು ಬದ್ಧವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಬಾರ್ ಸ್ಥಳಾಂತರಕ್ಕೆ ಅನುಮತಿ ಪಡೆದಿದ್ದಾರೆ ತೆರವುಗೊಳಿಸುವ ಅಧಿಕಾರ ನಮಗೆ ಇಲ್ಲ ಎಂದೂ ಶಾಸಕರಿಗೆ ಮಾಹಿತಿ ನೀಡಿದರು.ಈ ಸಂಧರ್ಭದಲ್ಲಿ ಅಬಕಾರಿ ಜಿಲ್ಲಾಧಿಕಾರಿಗೆ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು.ನಂತರ ಪ್ರತಿಭಟನಾಕಾರರು ಅಹೋರಾತ್ರಿ ಧರಣಿಗೆ ನಿರ್ಧರಿಸಿದರು..
ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಶಾಸಕರು ಕೂಡಲೇ ವಿನಾಯಕ ವೃತ್ತದ ಗುರುಕೃಪ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಾದ ಎಂ ಬಿ ಲಕ್ಷಣ ಗೌಡರನ್ನು ಕರೆಯಿಸಿ ಈಗಾಗಲೇ ಅಂಗಡಿ ಬದಲಾವಣೆಗಾಗಿ ಸರ್ಕಾರಕ್ಕೆ ಹಣ ಸಂದಾಯ ಮಾಡಿದ್ದೀರಿ ಇದರಿಂದ ನಿಮಗೆ ನಷ್ಟ ಆಗುತ್ತದೆ ಆದರೆ ಸಾರ್ವಜನಿಕರ ವಿರೋಧ ಕಟ್ಟಿಕೊಂಡು ವ್ಯಾಪಾರ ಮಾಡುವುದು ಬೇಡ ಎಂದು ಹಾಗೂ ಮೊದಲಿದ್ದ ಬಾರ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆಯ ಭರವಸೆ ನೀಡಿದರು.
ಕೂಡಲೇ ಶಾಸಕರ ಮನವಿಗೆ ಸ್ಪಂದಿಸಿದ ಬಾರ್ ಮಾಲೀಕರಾದ ಎಂ ಬಿ ಲಕ್ಷ್ಮಣ ಗೌಡರು ಶಾಸಕರ ಸಲಹೆಯಂತೆ ನಾನು ಸಾರ್ವಜನಿಕರ ವಿರೋಧ ಕಟ್ಟಿಕೊಂಡು ಅವರಿಗೆ ತೊಂದರೆ ನೀಡಿ ವ್ಯಾಪಾರ ಮಾಡಲು ಸಿದ್ಧನಿಲ್ಲ.ಮೊದಲಿರುವ ಜಾಗಕ್ಕೆ ಬಾರ್ ಅನ್ನು ಶೀಘ್ರದಲ್ಲಿ ಸ್ಥಳಾಂತರ ಗೊಳಿಸವುದಾಗಿ ಒಪ್ಪಿಗೆ ನೀಡಿದ ಬಳಿಕ ಪ್ರತಿಭಟನೆ ಸುಖಾಂತ್ಯ ಗೊಂಡಿತು.
ಈ ಸಂಧರ್ಭದಲ್ಲಿ ಪ್ರತಿಭಟನಕಾರರು ಶಾಸಕರಾದ ಹರತಾಳು ಹಾಲಪ್ಪ ಹಾಗೂ ಎಂ ಬಿ ಲಕ್ಷಣ ಗೌಡರಿಗೆ ಜೈಕಾರ ಕೂಗಿ ಹರ್ಷ ವ್ಯಕ್ತ ಪಡಿಸಿದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಸಾರ್ವಜನಿಕರು ಧನ್ಯವಾದ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ಜೆಡಿಎಸ್ ಮುಖಂಡರಾದ ಆರ್.ಎ ಚಾಬುಸಾಬ್,ಬಿಜೆಪಿಯ ಹಿರಿಯ ಮುಖಂಡರಾದ ಆರ್ ಟಿ ಗೋಪಾಲ್. ಗಣಪತಿ ಬಿಳಗೋಡು ,ಆರ್ ಎನ್ ಮಂಜುನಾಥ್,ಗ್ರಾ ಪಂ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿ ರಾವ್,ಮೆಣಸೆ ಆನಂದ್,ಎಲ್ ವೆಂಕಟೇಶ್, ಗ್ರಾ ಪಂ ಎಲ್ಲಾ ಸದಸ್ಯರು,ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅನುಪಸ್ಥಿತಿ::
ಇದನ್ನು ಸರ್ವ ಪಕ್ಷದ ಪ್ರತಿಭಟನೆ ಎಂದು ಪ್ರತಿಭಟನಾಕಾರರು ಹೇಳಿದರೂ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿ,ಮುಖಂಡರು ಹಾಗೂ ಕಾರ್ಯಕರ್ತರ ಅನುಪಸ್ಥಿತಿ ಈ ಪ್ರತಿಭಟನೆಯಲ್ಲಿ ಎದ್ದು ಕಾಣುತ್ತಿತ್ತು.
ವರದಿ:ರಾಮನಾಥ್ ರಿಪ್ಪನ್ ಪೇಟೆ