ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ – ಲೈಸೆನ್ಸ್ ರದ್ದುಗೊಳಿಸಿದ ಜಿಲ್ಲಾಧಿಕಾರಿ | ನಾಮಫಲಕಗಳ ತೆರವು
ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ವರದಿಯನ್ನಾಧರಿಸಿ ಗ್ರಾಮ-ಓನ್ ಕೇಂದ್ರದ ಲೈಸೆನ್ಸ್(ಐಡಿ)ನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆಘಾತಕಾರಿ ಘಟನೆಯೊಂದು ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದಲ್ಲಿ ಬೆಳಕಿಗೆ ಬಂದಿತ್ತು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಫ಼ಿ ರಿಪ್ಪನ್ ಪೇಟೆ ಸ್ಥಳಕ್ಕೆ ತೆರಳಿ ಗ್ರಾಮ ಒನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಂತರ ಸ್ಥಳಕ್ಕೆ ದೌಡಯಿಸಿದ ಉಪ ತಹಶೀಲ್ದಾರ್ ರವರಿಗೆ ಭ್ರಷ್ಟಾಚಾರದ ಕೂಪವಾಗಿರುವ ಈ ಗ್ರಾಮ ಒನ್ ಐಡಿಯನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನಾಧರಿಸಿ ಉಪ ತಹಶೀಲ್ದಾರ್ ಸ್ಥಳ ಮಹಜರು ನಡೆಸಿ ಆರೋಪದಲ್ಲಿ ಸತ್ಯಾಂಶವಿರುವ ಬಗ್ಗೆ ತಹಶೀಲ್ದಾರ್ ರಶ್ಮಿ ಹೆಚ್ ರವರಿಗೆ ವರದಿ ಸಲ್ಲಿಸಿದ್ದರು.
ಈ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಸಕಾಲ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕಂದಾಯ ಇಲಾಖೆಯ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೇಂದ್ರದ ಐಡಿ ರದ್ದುಗೊಳಿಸುವಂತೆ ವರದಿ ಸಲ್ಲಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಇಂದು ಐಡಿ ರದ್ದಾಗಿದ್ದು ನಮ್ಮ ಸಿಬ್ಬಂದಿಗಳು ಸದರಿ ಕೇಂದ್ರದಲ್ಲಿದ್ದ ನಾಮಫಲಕಗಳನ್ನು ತೆರವುಗೊಳಿಸಿದ್ದಾರೆ ಎಂದರು.
ಹೊಸನಗರ ತಾಲೂಕಿನ ಯಾವುದೇ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ಕೇಳಿದರೇ ಹಾಗೂ ಸಕಾಲ ಸೇವೆಗೆ 21 ದಿನಗಳಾಗುತ್ತದೆ ಅದನ್ನು ಬೇಗ ಮಾಡಿಕೊಡಿತ್ತೇವೆ ಎಂದು ಹೆಚ್ಚಿಗೆ ಹಣ ಕೇಳಿದರೆ ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಅಥವಾ ನನಗೆ ನೇರ ಕರೆ ಮಾಡಿ ತಿಳಿಸಿ ಎಂದು ಹೇಳಿ ನಮ್ಮ ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಉತ್ತಮ ಸೇವೆ ನೀಡುವ ಮೂಲಕ ಸಕಾಲ ಸೇವೆಗಳು 2 ರಿಂದ 3 ದಿನಗಳಲ್ಲಿ ದೊರಕುತಿದ್ದು ಇದ್ದನೇ ಬಂಡವಾಳ ಮಾಡಿಕೊಂಡಿರುವ ಕೆಲವು ಮದ್ಯವರ್ತಿಗಳು ಹಾಗೂ ಗ್ರಾಮ-ಓನ್ ಸಿಬ್ಬಂದಿಗಳು ಹೆಚ್ಚುವರಿ ಹಣ ಕೇಳುತ್ತಿರುವ ಬಗ್ಗೆ ದೂರು ಬಂದಿದೆ ಎಂದರು.
ಘಟನೆಯ ಹಿನ್ನಲೆ :
ಜೂನ್ 23 ರಂದು ಪಟ್ಟಣದ ಬಡ ವೃದ್ದೆ ಬೀಬಿಜಾನ್ ಎಂಬುವವರು ಆಧಾರ್ ಕಾರ್ಡ್ ನ ನಂಬರ್ ಬದಲಾವಣೆಗೆ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರಕ್ಕೆ ಬಂದಿದ್ದಾಗ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ನಿಗದಿತ ಶುಲ್ಕ 50ರೂ ಪಡೆಯುವುದನ್ನು ಬಿಟ್ಟು ಹೆಚ್ಚುವರಿ 350 ರೂ ಹಣವನ್ನು ವಸೂಲಿ ಮಾಡಿದ್ದಾರೆ.ಹಾಗೇ ಇನ್ನೊಬ್ಬ ವ್ಯಕ್ತಿಯ ಪಾನ್ ಕಾರ್ಡ್ ಹೆಸರು ಬದಲಾವಣೆಗೆ 1000ರೂ ಕೇಳಿದ್ದರೆ , ಪಟ್ಟಣದ ನಿವಾಸಿ ಮುಸ್ತಫಾ ಎಂಬುವವರ ವೋಟರ್ ಐಡಿ ಹೆಸರು ಬದಲಾವಣೆಗೆ 150 ರೂ ಶುಲ್ಕ ಕೇಳಿರುವ ಬಗ್ಗೆ ಹಾಗೇಯೇ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಕೇಂದ್ರದ ಬಗ್ಗೆ ಹಲವಾರು ದೂರುಗಳು ಕೇಳಿಬಂದಿತ್ತು ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿತ್ತು ಮತ್ತು ನಿನ್ನೆ ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮ-ಓನ್ ಭ್ರಷ್ಟಾಚಾರದ ಬಗ್ಗೆ ತಹಶೀಲ್ದಾರ್ ಗೆ ಪತ್ರ ಬರೆಯುವ ಬಗ್ಗೆ ಒಕ್ಕೊರಲಿನ ಸಭೆಯಿಂದ ತೀರ್ಮಾನವಾಗಿತ್ತು.
ಈ ಬಗ್ಗೆ ಮಾಹಿತಿಯನ್ನಾಧರಿಸಿದ ಸಾಮಾಜಿಕ ಕಾರ್ಯಕರ್ತ ರಫ಼ಿ ರಿಪ್ಪನ್ ಪೇಟೆ ಬಡ ವೃದ್ದೆ ಹಾಗೂ ಇನ್ನಿಬ್ಬರು ಸಂತ್ರಸ್ಥರೊಂದಿಗೆ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಸರ್ಕಾರಗಳು ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಹಮ್ಮಿಕೊಂಡು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಯತ್ನಿಸುತ್ತಿದೆ ಆದರೆ ನೀವು ಮಧ್ಯವರ್ತಿಗಳಿಗಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ನ್ಯಾಯವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಆರೋಪಕ್ಕೆ ಗ್ರಾಮ ಒನ್ ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಕಾರಣ ಸ್ಥಳದಿಂದಲೇ ತಹಶೀಲ್ದಾರ್ ರಶ್ಮಿ ಹಾಲೇಶ್ ರವರಿಗೆ ಮಾಹಿತಿ ನೀಡಿದ್ದರು.
ತಹಶೀಲ್ದಾರ್ ಸೂಚನೆ ಮೇರೆಗೆ ಉಪ ತಹಶೀಲ್ದಾರ್ ಗೌತಮ್ ಹಾಗೂ ರಾಜಸ್ವ ನಿರೀಕ್ಷಕರಾದ ಅಫ಼್ರೋಜ್ ಅಹಮದ್ ಸ್ಥಳಕ್ಕಾಗಮಿಸಿ ಸಂತ್ರಸ್ಥರ ಬಳಿ ಅಹವಾಲುಗಳನ್ನು ಆಲಿಸಿ ಗ್ರಾಮ ಒನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗಲೇ ಅನಿರೀಕ್ಷಿತವಾಗಿ ಸ್ಥಳಕ್ಕಾಗಮಿಸಿದ ಮಹಿಳೆಯೊಬ್ಬರು ನನ್ನ ಮೂರು ಸೇವೆ ಗಳಿಗೆ 900 ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ ಈ ಬಗ್ಗೆ ಗ್ರಾಮ ಒನ್ ಸಿಬ್ಬಂದಿ ಉತ್ತರಿಸಲು ತಡಕಾಡಿದ ಪ್ರಸಂಗ ಕಂಡುಬಂದಿತು.ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಉಪ ತಹಶೀಲ್ದಾರ್ ಗೌತಮ್ ಈ ಗ್ರಾಮ ಒನ್ ಕೇಂದ್ರದ ಮೇಲಿನ ಹೆಚ್ಚುವರಿ ಹಣ ವಸೂಲಿ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ತಿಳಿದುಬಂದಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಗ್ರಾಮ ಒನ್ ಕೇಂದ್ರಗಳ ಕಾರ್ಯವೈಖರಿಯನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು.ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಒನ್ ನೋಡಲ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬಡವರಿಗೆ ನ್ಯಾಯ ಒದಗಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.