ಭಾರತ ರತ್ನ ಪ್ರಶಸ್ತಿಯಲ್ಲಿ ಕಾಂಗ್ರೆಸ್ ರಾಜಕೀಯ ಸರಿಯಲ್ಲ: ಆರಗ ಜ್ಞಾನೇಂದ್ರ | Araga
ಕಾಂಗ್ರೆಸ್ನವರು ಅಧಿ ಕಾರದಲ್ಲಿದ್ದಾಗ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬಹುದಿತ್ತು. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ ತಮಗೆ ಭಾರತ ರತ್ನವನ್ನು ಕೊಟ್ಟು ಕೊಂಡಿದ್ದಾರೆ.ತಮ್ಮ ತಂದೆಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿ ಕಾರದಲ್ಲಿದ್ದಾಗ ಅವರಿಗೆ ಅವರೇ ಭಾರತ ರತ್ನವನ್ನು ಕೊಟ್ಟು ಕೊಂಡಿದ್ದಾರೆ. ಅಡ್ವಾಣಿ ಅವರಿಗೆ ಕೊಟ್ಟಾಗ ತಕರಾರು ಎತ್ತುವುದು ಸರಿಯಲ್ಲ. ಸಣ್ಣತನ ತೋರುವುದು ಸರಿಯಲ್ಲ. ದೇಶಕ್ಕಾಗಿ ಅರ್ಪಣೆ ಮಾಡಿಕೊಂಡು ಬದುಕಿದ ವ್ಯಕ್ತಿಗಳಿಗೆ ಕೊಟ್ಟಾಗ ಸಣ್ಣ ಮಾತು ಆಡುವುದು ಕಾಂಗ್ರೆಸ್ನ ಕೀಳು ರಾಜಕಾರಣ ತೋರಿಸುತ್ತದೆ.
ನಾನು ತುಂಬಾ ಹತ್ತಿರದಿಂದ ಅಡ್ವಾಣಿ ಅವರನ್ನು ನೋಡಿದ್ದೇನೆ. ನಾಲ್ಕು ಭಾಗದಿಂದ ದೇಶವನ್ನು ನಿಜವಾಗಿ ಜೋಡಿಸಿದ್ದು ಅಡ್ವಾಣಿಯವರೇ. ಸೂಡೋ ಸೆಕ್ಯುಲರ್ ಎಂಬ ಹೊಸ ಪದವನ್ನು ಹುಟ್ಟು ಹಾಕಿದವರು. ಆಗ ಸೆಕ್ಯುಲರ್ ಹೆಸರಿನಲ್ಲಿ ಹಿಂದೂಗಳನ್ನು ತುಳಿಯುತ್ತಿದ್ದರು. ಒಂದು ಸಮುದಾಯವನ್ನು ತುಷ್ಟೀಕರಣ ಮಾಡುವುದು ನಡೀತಾ ಇತ್ತು. ಅದಕ್ಕೆ ಬಹಳ ದೊಡ್ಡ ಕೌಂಟರ್ ಕೊಟ್ಟಿದ್ದು ಅಡ್ವಾಣಿಯವರೇ. ಕಾಂಗ್ರೆಸ್ನವರು ಶಿವಕುಮಾರ ಸ್ವಾಮೀಜಿ ಅವರಿಗೂ ಭಾರತ ರತ್ನ ಕೊಡಬೇಕು ಅನ್ನುತ್ತಿದ್ದಾರೆ. ನಾವು ಸಹ ಮೊದಲಿನಿಂದಲೂ ಭಾರತ ರತ್ನ ಕೊಡಿ ಎಂದು ಹೇಳಿದ್ದೇವೆ. ಶಿವಕುಮಾರ ಸ್ವಾಮೀಜಿಗೂ ಭಾರತ ರತ್ನ ಕೊಡಬೇಕು. ಆದರೆ ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟಾಗ ಪ್ರಶ್ನೆ ಮಾಡೋದು ಸರಿ ಅಲ್ಲ ಎಂದರು.