ಹುತಾತ್ಮ ಯೋಧ ಮಂಜುನಾಥ್ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ – ನಾಳೆ ಸಾರ್ವಜನಿಕ ದರ್ಶನ, ಅಂತ್ಯಕ್ರಿಯೆ : ಸಿದ್ದತೆ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದ್ದೇನು..!?
ಹೊಸನಗರ : ಪ್ಯಾರಚೂಟ್ ನಿಷ್ಕ್ರಿಯಗೊಂಡು ಹುತಾತ್ಮರಾದ ಪ್ಯಾರಾ ಇನ್ಸ್ಟ್ರಕ್ಟರ್ ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು ನಾಳೆ ಬೆಳಿಗ್ಗೆ ಹೊಸನಗರದ ಮಾವಿನಕೊಪ್ಪದಿಂದ ಸಂಕೂರಿನಲ್ಲಿರುವ ಅವರ ಮನೆಯವರೆಗೂ ಪಾರ್ಥೀವ ಶರೀರದ ಮೆರವಣಿಗೆ ಸಾಗಲಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಇಂದು ರಾತ್ರಿ 12 ರ ಸುಮಾರಿಗೆ ಆಗ್ರಾದಿಂದ ಬೆಂಗಳೂರಿಗೆ ಪ್ರಾರ್ಥೀವ ಶರೀರ ತಲುಪಲಿದ್ದು ನಾಳೆ ಬೆಳಿಗ್ಗೆ ಸುಮಾರು 8 ಗಂಟೆಗೆ ಹೊಸನಗರದ ಮಾವಿನಕೊಪ್ಪ ತಲುಪಲಿದ್ದು ಅಲ್ಲಿಂದ ಮೆರವಣಿಗೆ ಮೂಲಕ ಸಂಕೂರಿನಲ್ಲಿರುವ ಮಂಜುನಾಥ್ ರವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ.ಮನೆಯ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಅಂತಿಮ ದರ್ಶನಕ್ಕಾಗಿ ತಾಲೂಕು ಆಡಳಿತ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಹೊಸನಗರದ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿಗಳು ಮಾದ್ಯಮಗಳಲ್ಲಿ ಹರಿದಾಡುತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಹುತಾತ್ಮ ಯೋಧನ ಸ್ವಗೃಹದ ಆವರಣದಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಹುತಾತ್ಮ ಯೋಧನ ಗ್ರಾಮದಲ್ಲಿ ಬೀಡು ಬಿಟ್ಟ ಅಧಿಕಾರಿಗಳು ಹಾಗೂ ಶಾಸಕರ ಆಪ್ತರು :
ಹೊಸನಗರ ತಾಲೂಕಿನ ಪಟಗುಪ್ಪ ಬಳಿಯ ಸಂಕೂರು ನಿವಾಸಿ ಮಂಜುನಾಥ್ ಜಿ ಎಸ್(36) ಪ್ಯಾರಚೂಟ್ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿಯುತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆಯ ಮೇರೆಗೆ ತಹಶೀಲ್ದಾರ್ ರಶ್ಮಿ ಹಾಲೇಶ್ , ಸರ್ಕಲ್ ಇನ್ಸ್ ಪೆಕ್ಟರ್ ಗುರಣ್ಣ ಹೆಬ್ಬಾಳ್ ಹಾಗೂ ನಿವೃತ್ತ ಯೋಧ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಮೃತ ಯೋಧನ ಗ್ರಾಮದಲ್ಲಿ ಬೀಡುಬಿಟ್ಟು ಅಂತ್ಯಕ್ರಿಯೆಯ ಸಿದ್ದತೆ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
ಆಗ್ರಾದ ಪ್ಯಾರಾ ಟ್ರೈನಿಂಗ್ ಸ್ಕೂಲ್ ನಲ್ಲಿ ವಾರಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದ ಮಂಜುನಾಥ್ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಾಚೂಟ್ ನಿಷ್ಕ್ರಿಯವಾದ ಕಾರಣ ನಿಯಂತ್ರಣ ಕಳೆದುಕೊಂಡು ಸುಮಾರು 13 ಸಾವಿರ ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಕೊನೆಯಲ್ಲಿ ಮಧ್ಯಾಹ್ನ 2.30 ಗೆ ಮೃತದೇಹ ಡ್ರಾಫಿಂಗ್ ಝೋನ್ ಮಲ್ಪುರ ಬಳಿ ಮೃತದೇಹ ಪತ್ತೆಯಾಗಿದೆ.
ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಕೇಂದ್ರದಲ್ಲಿ ಸ್ಕೈಡೈವಿಂಗ್ ವೇಳೆ ಹಾರಿದ 12 ಮಂದಿ ಮಂಜುನಾಥ್ ಜಿ ಎಸ್ ವರ್ಷದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದಾರೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.



