ಆನೆಯಿಂದ, ಬೆಳೆ ಹಾನಿ: ಸೂಕ್ತ ಪರಿಹಾರಕ್ಕಾಗಿ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ರೈತರ ಪ್ರತಿಭಟನೆ
ಶಿವಮೊಗ್ಗ : ರೈತರ ಬೆಳೆ ನಾಶ ಮಾಡುತ್ತಿರುವ ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಲೆನಾಡು ಪ್ರದೇಶದ ರೈತರು ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದೆ. ಬಸವಾಪುರದ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿ ಪಡೆದಿವೆ. ರೈತರು ಪ್ರಾಣ ಭಯದಿಂದ ಓಡಾಡುವ ಸ್ಥಿತಿ ಎದುರಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ, ಅರಣ್ಯ ಸಚಿವರಿಗೆ ಮತ್ತು ಸರ್ಕಾರಕ್ಕೆ ಅನೇಕ ಬಾರಿ ದೂರು ನೀಡಲಾಗಿದೆ. ಸದನದಲ್ಲೂ ಚರ್ಚೆಯಾಗಿದೆ. ರೈತರ ಪ್ರಾಣ ಬಲಿಯಾಗುತ್ತಿದ್ದರೂ, ಸರ್ಕಾರ ಹಾಗೂ ಅರಣ್ಯಾಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಖಂಡಿಸಿ ಅನಿವಾರ್ಯವಾಗಿ ಸಮಸ್ಯೆ ಬಗೆಹರಿಯುವವರೆಗೆ ಅನಿದಿ೯ಷ್ಟಾವಧಿ ಮುಷ್ಕರ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ರೈತ ಮುಖಂಡ ವೀರೇಶ್ ಆಲುವಳ್ಳಿ ಮಾತನಾಡಿ, ಶಾಶ್ವತ ಪರಿಹಾರ ಸಿಗುವವರೆಗೆ ನಾವು ಹೋರಾಟ ಮುಂದುವರೆಸುತ್ತೇವೆ. ಅನೇಕ ರೈತರ ಮೇಲೆ ಆನೆಗಳು ದಾಳಿ ಮಾಡಿವೆ. ಇತ್ತೀಚೆಗೆ ದೇವೇಂದ್ರಪ್ಪ ಎಂಬ ರೈತ ಕೂಡ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಬಿಜೆಪಿ ಶಾಸಕರು ಸದನದಲ್ಲಿ ಹೋರಾಟ ಮಾಡಿದ್ದರ ಫಲವಾಗಿ ೧೫ ಲಕ್ಷರೂ. ಘೋಷಣೆ ಮಾಡಿದ್ದರೂ ಕೂಡ ಹೊಲಸು ರಾಜಕಾರಣದಿಂದಾಗಿ ಶಾಸಕರು ಊರಲ್ಲಿಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡಲು ಬಡ ರೈತನ ಕುಟುಂಬಕ್ಕೆ ಎರಡು ತಿಂಗಳು ವಿಳಂಬ ಮಾಡಿದ್ದಾರೆ ಎಂದು ದೂರಿದರು.
ಬೆಳೆನಾಶ ಮಾಡುವ ಕಾಡುಪ್ರಾಣಿಗಳಿಗೆ ಗುಂಡು ಹೊಡೆಯಲು ಅವಕಾಶ ಕೊಡಿ – ಆರಗ ಜ್ಞಾನೇಂದ್ರ
ರೈತರು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಅಂತಹ ಪ್ರಾಣಿಗಳನ್ನು ಅರಣ್ಯ ಇಲಾಖೆಯವರು ಹಿಡಿದುಕೊಂಡು ಹೋಗಬೇಕು ಅಥವಾ ಬೆಳೆ ಹಾನಿ ಮಾಡುವ ಕಾಡುಪ್ರಾಣಿಗಳಿಗೆ ಗುಂಡು ಹೊಡೆಯಲು ರೈತರಿಗೆ ಅನುಮತಿ ಕೊಡಬೇಕು ಎಂದು ಅರಣ್ಯಾಧಿಕಾರಿಗಳ ವಿರುದ್ಧ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಇಂದು ಪ್ರಾಣಿಗಳಿಂದ ನಮ್ಮನ್ನು ರಕ್ಷಣೆ ಮಾಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ಪ್ರಾಣಿ ಮತ್ತು ಮನುಷ್ಯನ ಸಂಘರ್ಘ ಮೀತಿ ಮಿರುತ್ತಿದೆ. ಅರಣ್ಯಾಧಿಕಾರಿಗಳಿಗೆ ಕಾಡಿನಲ್ಲಿ ಗಿಡ ನೆಡಿ ಎಂದರೆ ರೈತರ ಮನೆ ಹಿಂಬಾಗಿಲಲ್ಲಿ ಬಂದು ಅಗಲು ಹೊಡಿಯುತ್ತಿದ್ದಾರೆ. ಮಲೆನಾಡಿನ ಭಾಗದ ಜನರ ಸಮಸ್ಯೆಯನ್ನ ಸರ್ಕಾರ ಅರ್ಥವೇ ಮಾಡಿಕೊಂಡಿಲ್ಲ. ರೈತರು ಬೆಳೆದು ಕೊಟ್ಟ ಆಹಾರವನ್ನು ನೀವು ಅರಾಮಾಗಿ ಕೂತುಕೊಂಡು ಊಟ ಮಾಡ್ತೀರ ಆದರೆ ರೈತರ ಕಷ್ಟಕ್ಕೆ ನೀವು ಸ್ಪಂದಿಸುವುದಿಲ್ಲ. ನಿಮ್ಮ ಇಲಾಖೆಯ ಕಾಡು ಪ್ರಾಣಿಗಳನ್ನು ನೀವು ಹಿಡಿದುಕೊಂಡು ಹೋಗಿ ಇಲ್ಲಾ ಬೆಳೆ ಹಾನಿ ಮಾಡುವ ಕಾಡು ಪ್ರಾಣಿಗೆ ಗುಂಡು ಹೊಡೆಯಲು ಅನುಮತಿ ಕೊಡಿ ಎಂದು ಅರಣಾಧಿಕಾರಿಗಳ ವಿರುದ್ದ ಗುಡುಗಿದರು.
ರೈತರ ಹಣೆಬರಹವನ್ನು ಅರಣ್ಯ ಇಲಾಖೆಯವರು ಬರೆಯುತ್ತಿದ್ದಾರೆ ನಾವು ಬೆಳೆ ಬೆಳೆದು ಕಾಡು ಪ್ರಾಣಿಗೆ ಆಹಾರ ಕೊಡುವಂತಾಗಿದೆ. ನಮ್ಮ ಬದುಕು ಹಾಗೂ ನಾವು ತಿನ್ನುವ ಆಹಾರವನ್ನು ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ. ರೈತರ ಹಣೆ ಬರಹ ದೇವರು ಬರೆಯುತ್ತಿಲ್ಲ ಅರಣ್ಯ ಇಲಾಖೆಯವರು ಬರೆಯುತ್ತಿದ್ದಾರೆ.ಕಾಡು ರಕ್ಷಣೆ ಆಗಿರೋದು ಅರಣ್ಯ ಇಲಾಖೆಯವರಿಂದಲ್ಲ ರೈತರಿಂದ ಎಂದರು.