6.12 ಕೋಟಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ

6.12 ಕೋಟಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ

ರಿಪ್ಪನ್‌ಪೇಟೆ;- ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ೬.೧೨ ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಯೋಜನೆ ಕಾಮಗಾರಿಗೆ ಶಾಸಕ ಹಾಗೂ ರಾಜ್ಯ ಅರಣ್ಯ ಮತ್ತು ಕೈಗಾರಿಕಾಭಿವೃಧ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ  ಬೇಳೂರು ಜಲಜೀವನ್ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.


ನಂತರ ಶಾಸಕ ಗೋಪಾಲಕೃಷ್ಣ ಬೇಳೂರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನಗೊಳಿಸಿದೆ.ಬಜೆಟ್‌ಗೆ ಮುನ್ನವೇ ಕ್ಷೇತ್ರದ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ಷೇತ್ರದ ಮತದಾರರ ಮತ್ತು ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ಅಗತ್ಯ ಇರುವ ಕಡೆಯಲ್ಲಿಗೆ ಅಧ್ಯತೆಯ ಮೂಲಕ ಸರ್ಕಾರದಿಂದ ಅನುದಾನ ಕೋರಿ ಮನವಿ ಮಾಡಿಕೊಂಡ ಮೇರೆಗೆ ಸರ್ಕಾರ ಅನುಧಾನವನ್ನು ಬಿಡುಗಡೆ ಮಾಡಿದ್ದು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡುವುದಾಗಿ ವಿವರಿಸಿದ ಅವರು ಕಳೆದ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಡ್ಯಾಂ ಗಳು ಕೆರೆಕಟ್ಟೆಗಳು ತುಂಬದೇ ಅಂತರ್ಜಲ ಸಹ ಇಲ್ಲದೆ ಬಿತ್ತನೆ ಮಾಡಲಾದ ಬೆಳೆ ಸಹ ಕೈಗೆ ಸಿಗದೆ ಸಾಕಷ್ಟು ಸಂಕಷ್ಟವನ್ನು ನಮ್ಮ ರೈತ ಸಮುದಾಯ ಎದುರಿಸುವಂತಾಗಿದೆ ಎಂದು ಅತಂಕ ವ್ಯಕ್ತಪಡಿಸಿ ಮಳೆಯಿಲ್ಲದೇ ಕುಡಿಯುವ ನೀರಿನ ಸಮಸ್ಯೆ ಸಹ ಎದುರಾಗಿದೆ.ಯಾವುದೇ ಕಾರಣವನ್ನು ನೀಡದೆ ನೀರಿನ ಸಮಸ್ಯೆ ಉದ್ಬವವಾದಲ್ಲಿ ತಕ್ಷಣ ಗ್ರಾಮಾಡಳಿತ ತುರ್ತು ಬೋರ್‌ವೆಲ್ ತೆಗೆಸಲು ಟಾಸ್ಕಾಪೋರ್ಸ್ನಲ್ಲಿ ಅಥವಾ ತುರ್ತು ಪರಿಹಾರ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಶರಾವತಿ ಮುಳುಗಡೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಒತ್ತುವರಿ ಮಾಡದೇ ಈ ಹಿಂದೆ ಅರಣ್ಯ ಇಲಾಖೆಯವರು ಗುರುತಿಸಲಾದ ಜಾಗ ಹೊರತು ಪಡಿಸಿ ಸಾಗುವಳಿ ಮಾಡುವ ರೈತರಿಗೆ ಹಕ್ಕು ಪತ್ರ ನೀಡುವುದರ ಬಗ್ಗೆ ಇನ್ನೊಮ್ಮೆ ಅರಣ್ಯ ಕಂದಾಯ ಇಲಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

ಚಕ್ರಾನಗರದಿಂದ ಕೆರೆಹಳ್ಳಿ-ಕಸಬಾ ಹೊಸನಗರ ವ್ಯಾಪ್ತಿಗೆ ೪೧೭ ಕೋಟಿ ರೂ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಹಣ ಬಿಡುಗಡೆಯಾಗಿದ್ದು ಟೆಂಡರ್ ಸಹ ಕರೆಯಲಾಗಿದೆ.ಮುಂದಿನ ವರ್ಷದಲ್ಲಿ ಪೈಪ್ ಲೈನ್ ಕಾಮಗಾರಿ ಮುಗಿಸಿ ನೀರು ತರುವುದಾಗಿ ಭರವಸೆ ನೀಡಿದರು.

ಬಂಗಾರಪ್ಪಾಜಿಯವರು ಹೇಳುವಂತೆ ಅಭಿವೃದ್ದಿಗಿಂತ ಮತದಾರರ ಹಿತ ಮುಖ್ಯ ಅಭಿವೃದ್ಧಿ ಯಾವುದೇ ಸರ್ಕಾರ ಬರಲಿ ಅದು ಅಗುತ್ತದೆ.ಅದರೆ ಜನಸಾಮಾನ್ಯರಿಗೆ ಏನಾದರೂ ತೊಂದರೆಗಳಾದರೆ ತಕ್ಷಣ ಸ್ಪಂದಿಸಿ  ಪರಿಹಾರ ಕಲ್ಪಿಸಿದಾಗ ಮಾತ್ರ ಆತ ಜನನಾಯಕನಾಗಲು ಸಾಧ್ಯವೆಂದರು.

ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಉಂಡಗೋಡು ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ,ಅರಸಾಳು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದೇವರಾಜ,ಸದಸ್ಯರಾದ ಉಮಾಕರ,ಯೋಗೇಂದ್ರ,ಉಮೇಶ,ಅರುಣ್ ಅರಸಾಳು,ನಾಗಪ್ಪ ,ಸೋಮಶೇಖರ್,ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರ್ ಸದಸ್ಯರಾದ ಆಸೀಫ಼್ ಭಾಷಾ, ಗಣಪತಿ, ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ಪಕ್ಷದ ಮುಖಂಡರುಗಳಾದ ಹರ್ಷ,ರವೀಂದ್ರ, ಮಂಜು, ಶ್ರೀಧರ್, ವಾಸುದೇವಾ,ರಘುಪತಿ,ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *