ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ – ಹೊಸದಾಗಿ ಅರಣ್ಯ ಕಡಿಯಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ | Belluru

ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ – ಹೊಸದಾಗಿ ಅರಣ್ಯ ಕಡಿಯಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ | Belluru


ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಯಾವೊಬ್ಬ ರೈತ ನನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಎರಡು ಹೊತ್ತಿನ ಗಂಜಿಗೆ ದಾರಿಮಾಡಿಕೊಂಡಿರುವ ರೈತರು ಹೆದರುವ ಅವಶ್ಯಕತೆ ಇಲ್ಲ. ಆದರೆ ಹೊಸದಾಗಿ ಅರಣ್ಯವನ್ನು ಕಡಿಯಬೇಡಿ ಎಂದಷ್ಟೇ ನನ್ನ ಮನವಿ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಜೆ ಜೆ ಎಂ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಈ ಭಾಗದ ಜ್ವಲಂತ ಸಮಸ್ಯೆಯಾದ ಭೂ ಹಕ್ಕು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಯಾವೊಬ್ಬ ರೈತನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಆದರೆ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡುವುದನ್ನು ಬಿಟ್ಟು ಪರಿಸರ ಸಂರಕ್ಷಿಸಬೇಕು ಎಂದರು.


ರಾಜ್ಯ ಸರ್ಕಾರವು ಜಾತಿ, ಧರ್ಮ, ವರ್ಗ ಮೀರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಶೋಷಿತರ, ದೀನ-ದಲಿತರ ಪರವಾಗಿ ನಿಂತಿದೆ.ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬೆಲೆ ಏರಿಕೆಯಿಂದಾಗಿ ಜನಜೀವನ ನಡೆಸುವುದು ಕಷ್ಟಸಾಧ್ಯವಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಹಕಾರಿ ಆಗಿದ್ದು, ಮುಂಬರುವ ದಿನಗಳಲ್ಲಿ ಅವರ ಜೀವನಮಟ್ಟ ಸುಧಾರಿಸಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು. ಸರ್ಕಾರದ  ಎಲ್ಲಾ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅರ್ಹ ಫಲಾನುಭವಿಗಳ ಕೈ ಸೇರಿವೆ ಎಂದರು.

‘ಗ್ಯಾರಂಟಿ’ ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆ ಆಗಿದ್ದು, ಅರ್ಹರಿಗೆ ಯೋಜನೆಯ ಫಲ ಶೀಘ್ರವಾಗಿ ತಲುಪಿಸಲು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ಸರ್ಕಾರ ರಚಿಸಿದೆ. ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ಕುಟುಂಬ ಒಂದಕ್ಕೆ ವಾರ್ಷಿಕ ಸರಾಸರಿ ರೂ ಅರವತ್ತು ಸಾವಿರ ಹಣ ಫಲಾನುಭವಿಗಳಿಗೆ ಉಳಿತಾಯ ಆಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲತೆ ಹೆಚ್ಚುತ್ತಿದೆ. ಕುಟುಂಬ ನಿರ್ವಹಣೆ ಸುಗಮವಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಸಹಕಾರಿ ಆಗಿದೆ.

ಶಕ್ತಿಯೋಜನೆಯಿಂದ ಮಹಿಳೆಯರು ರಾಜ್ಯ ವ್ಯಾಪಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಅವರ ಆತ್ಮಶಕ್ತಿ ಹೆಚ್ಚಾಗುತ್ತಿದೆ. ಉಚಿತ ವಿದ್ಯುತ್ ನೀಡಿಕೆಯು ಹಣ ಉಳಿತಾಯಕ್ಕೆ ಕಾರಣವಾಗಿದೆ. ಉಚಿತ ಅಕ್ಕಿಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಅಗುವ ಮೂಲಕ ಅವರ ನೈತಿಕಶಕ್ತಿ ಹೆಚ್ಚಿಸಿದೆ ಎಂದರು.

57 ಸಾವಿರ ಕೋಟಿ ರೂ. ಅನುದಾನದ ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸರ್ಕಾರವು ಶೀಘ್ರದಲ್ಲೇ ಐದು ಸಾವಿರ ಸರ್ಕಾರಿ ಬಸ್ಸುಗಳ ಖರೀದಿಗೆ ಮುಂದಾಗಿದೆ. ಹೊಸನಗರ ತಾಲೂಕಿನಲ್ಲೂ ಕನಿಷ್ಟ ಇಪ್ಪತ್ತು ಕೆಂಪು ಸರ್ಕಾರಿ ಬಸ್‌ಗಳ ಚಾಲನೆಗೆ ತಾವು ಬದ್ದರಾಗಿರುವುದಾಗಿ  ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಪಂ ಅಧ್ಯಕ್ಷೆ ಹೇಮಾವತಿ ಸತೀಶ್ , ಗ್ರಾಪಂ ಸದಸ್ಯರಾದ ತಿಮ್ಮಪ್ಪ ಬೆಳ್ಳೂರು , ಭವಾನಿ , ಪಲ್ಲವಿ , ರಾಜೇಶ್ ಆರ್ , ರವೀಂದ್ರ ಎಸ್ , ಅರುಣ್ ಎಲ್ , ಕವಿತಾ ವೈ , ಷಣ್ಮುಖಪ್ಪ ಹಾಗೂ ನೀರಾವರಿ ಅಧಿಕಾರಿ ಶಿವಪ್ರಸಾದ್ , ಮುಖಂಡರಾದ ಆಸೀಫ಼್ ಭಾಷಾ , ಮಹಮ್ಮದ್ ಷರೀಫ್ , ಮಹೇಂದ್ರ ಬುಕ್ಕಿವರೆ ಹಾಗೂ ಇನ್ನಿತರರಿದ್ದರು.

ಶಿಕ್ಷಕರಾದ ಶಿವಮೂರ್ತಿ ನಿರೂಪಿಸಿದರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶ ಸ್ವಾಗತಿಸಿದರು

Leave a Reply

Your email address will not be published. Required fields are marked *