ಪರಿಸರಕ್ಕೆ ಮಾರಕವಾಗುತ್ತಿದೆ ಒಣಶುಂಠಿಗೆ ಬಳಸುತ್ತಿರುವ ಗಂಧಕ..!!
ರಿಪ್ಪನ್‌ಪೇಟೆ: ಕಳೆದೆರಡು ವರ್ಷದಿಂದ ಹಸಿ ಶುಂಠಿಗೆ ಬೆಲೆ ಇಲ್ಲ. ಆದ್ದರಿಂದ ಕೆಲ ವ್ಯಾಪಾರಸ್ಥರು, ದಲ್ಲಾಳಿಗಳು, ಶ್ರೀಮಂತ ರೈತರು ಕಂಡು ಕೊಂಡ ಪರಿಹಾರ ಗಂಧಕ ಬಳಸಿ ಒಣ ಶುಂಠಿ ಮಾಡುವುದು !
ಶುಂಠಿಗೆ ಬಣ್ಣ ಬರಲು ಹಾಗೂ ಮಾರುಕಟ್ಟೆ ಆಕರ್ಷಿಸಲು ಗಂಧಕ ಬಳಸುವ ತಂತ್ರಕ್ಕೆ ಅವರು ಮೊರೆ ಹೋಗಿದ್ದಾರೆ. ಇದರಿಂದ ಅವರ ಕೆಲಸವೇನೋ ಆಗಿದೆ. ಆದರೆ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯು ವಾತಾವರಣದಲ್ಲಿ ಸೇರಿ ದುರ್ನಾತ ಬೀರುತ್ತಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರ ಅಸಹನೆ, ನೋವು ಹೇಳತೀರದಾಗಿದೆ.
ರಾಜ್ಯದ ಪ್ರಮುಖ ಶುಂಠಿ ಕಣಜ ಮಲೆನಾಡಿನಲ್ಲಿ ಕೇರಳ ರಾಜ್ಯದ ವಲಸಿಗರು ವಾಣಿಜ್ಯ ಬೆಳೆಯಾಗಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದರಿಂದ ಇಲ್ಲಿನ ರೈತರು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಹಸಿ ಶುಂಠಿಗೆ ಬೆಲೆ ಇಲ್ಲದ ಕಾರಣ ಕೆಲವರು ಒಣಶುಂಠಿ ಮಾಡಿ, ಗಂಧಕ ಬಳಸುತ್ತಿದ್ದಾರೆ.
ಹೊಸನಗರ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಶುಂಠಿ ವಹಿವಾಟು ನಡೆಸುವ ವ್ಯಾಪಾರಸ್ಥರ ಸಂಖ್ಯೆ 500ಕ್ಕೂ ಅಧಿಕವಿದೆ. ಹಳ್ಳಿಗಳಲ್ಲಿ ನೂರಾರು ಒಣಶುಂಠಿ ಕಣಗಳಿವೆ. ಇಲ್ಲಿ ನಿತ್ಯ ಸಾವಿರಾರು ಮಹಿಳೆಯರು ಮತ್ತು ಕೃಷಿ ಕಾರ್ಮಿಕರು ಕಾರ‍್ಯನಿರ್ವಹಿಸುತ್ತಾರೆ.
ಒಂದು ಕ್ವಿಂಟಾಲ್ ಹಸಿ ಶುಂಠಿಗೆ 300 ಗ್ರಾಂ. ಗಂಧಕವನ್ನು ಬಳಸಲಾಗುತ್ತದೆ. ಇದರಿಂದ ತಿಕ್ಕಿದ ಹಸಿಶುಂಠಿ ಬೇಗನೆ ಒಣಗುತ್ತದೆ. ಜತೆಗೆ ಒಣಗಿದ ನಂತರ ಶುಂಠಿಗೆ ಡಿಲೆಕ್ಸ್ ಕಲರ್ ಬರುತ್ತದೆ. ಒಣ ಶುಂಠಿ ತಯಾರು ಮಾಡುವಾಗ ಎರಡು ಬಾರಿ ಗಂಧಕ ಬಳಸುತ್ತಾರೆ. ಬಳಿಕ ಒಣ ಶುಂಠಿ ಆಕರ್ಷಣೆ ಹೊಂದುತ್ತದೆ. ಹೀಗಾಗಿ ಅಧಿಕವಾಗಿ ಗಂಧಕ ಬಳಸಲಾಗುತ್ತಿದೆ ಎನ್ನುತ್ತಾರೆ ಶುಂಠಿ ಕಣದಲ್ಲಿ ಕೆಲಸ ಮಾಡುವವರೊಬ್ಬರು.
ಒಣ ಶುಂಠಿ ಕಣದಿಂದ ಸುಮಾರು ಎರಡು ಮೂರು ಕಿ.ಮೀ.ಅಂತರದಲ್ಲಿ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯ ದುರ್ನಾತ ಸಹಿಸಲಸಾಧ್ಯವಾಗಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರಿಂದ ದೂರುಗಳು, ಕೆಲವೆಡೆ ಗಲಾಟೆ, ವಿರೋಧಗಳು ವ್ಯಕ್ತವಾಗಿ ಪೊಲೀಸ್ ಠಾಣೆಯ ಕಟ್ಟೆ ಏರಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಗಮನಹರಿಸಿ, ತೊಂದರೆ ನಿವಾರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.ಗಂಧಕವನ್ನು ನಿಯಂತ್ರಿಸಲು ಪ್ರತ್ಯೇಕ ವಿಜಿಲೆನ್ಸ್ ಸ್ಕ್ವಾಡ್ ರಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಶುಂಠಿ ಕಣದ ಸುತ್ತಮುತ್ತಲಿನ ಪರಿಸರದಲ್ಲಿ ಗಂಧಕದ ಹೊಗೆಯಿಂದ ವಾತಾವರಣ ಕಲುಷಿತಗೊಂಡು ಆರೋಗ್ಯದಲ್ಲಿ ತೀವ್ರ ಪರಿಣಾಮ ಎದುರಿಸುವಂತಾಗಿದೆ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ ರೈತರು, ನಾಗರಿಕರ ದೂರು ನೀಡಿದ ಮೇರೆಗೆ ಅಧಿಕಾರಿಗಳು ಶುಂಠಿ ಕಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಗಂಧಕದ ಬಳಕೆಯಿಂದಾಗಿ ಉಂಟಾಗುವ ದುಷ್ಪರಿಣಾಮ ಬಗ್ಗೆ ವರದಿ ತಯಾರಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನೀಡಿದ್ದಾರೆ. ಆದರೂ ಇಲಾಖೆಯ ವರದಿ ಧಿಕ್ಕರಿಸಿ ಪುನಃ ಒಣಶುಂಠಿ ಕಣ ಮಾಡಿದ್ದಾರೆ.
ಒಣಶುಂಠಿಗೆ ಬಳಸುವ ಗಂಧಕದ ಹೊಗೆಯ ಸೇವನೆಯಿಂದ ಹಲವರಲ್ಲಿ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಹಾಗೂ ರಕ್ತ ಹೀನತೆ ಕಾಣಿಸಿಕೊಳ್ಳುವುದರೊಂದಿಗೆ ವಿಚಿತ್ರ ರೋಗ ಹರಡುವ ಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಾರೆ.
#ಜನಹಿತಕ್ಕಾಗಿ
– ರಫ಼ಿ ರಿಪ್ಪನ್‌ಪೇಟೆ