Breaking
12 Jan 2026, Mon

ಪರಿಸರಕ್ಕೆ ಮಾರಕವಾಗುತ್ತಿದೆ ಒಣಶುಂಠಿಗೆ ಬಳಸುತ್ತಿರುವ ಗಂಧಕ..!!

ಪರಿಸರಕ್ಕೆ ಮಾರಕವಾಗುತ್ತಿದೆ ಒಣಶುಂಠಿಗೆ ಬಳಸುತ್ತಿರುವ ಗಂಧಕ..!!

ರಿಪ್ಪನ್‌ಪೇಟೆ: ಕಳೆದೆರಡು ವರ್ಷದಿಂದ ಹಸಿ ಶುಂಠಿಗೆ ಬೆಲೆ ಇಲ್ಲ. ಆದ್ದರಿಂದ ಕೆಲ ವ್ಯಾಪಾರಸ್ಥರು, ದಲ್ಲಾಳಿಗಳು, ಶ್ರೀಮಂತ ರೈತರು ಕಂಡು ಕೊಂಡ ಪರಿಹಾರ ಗಂಧಕ ಬಳಸಿ ಒಣ ಶುಂಠಿ ಮಾಡುವುದು !
ಶುಂಠಿಗೆ ಬಣ್ಣ ಬರಲು ಹಾಗೂ ಮಾರುಕಟ್ಟೆ ಆಕರ್ಷಿಸಲು ಗಂಧಕ ಬಳಸುವ ತಂತ್ರಕ್ಕೆ ಅವರು ಮೊರೆ ಹೋಗಿದ್ದಾರೆ. ಇದರಿಂದ ಅವರ ಕೆಲಸವೇನೋ ಆಗಿದೆ. ಆದರೆ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯು ವಾತಾವರಣದಲ್ಲಿ ಸೇರಿ ದುರ್ನಾತ ಬೀರುತ್ತಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರ ಅಸಹನೆ, ನೋವು ಹೇಳತೀರದಾಗಿದೆ.

ರಾಜ್ಯದ ಪ್ರಮುಖ ಶುಂಠಿ ಕಣಜ ಮಲೆನಾಡಿನಲ್ಲಿ ಕೇರಳ ರಾಜ್ಯದ ವಲಸಿಗರು ವಾಣಿಜ್ಯ ಬೆಳೆಯಾಗಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದರಿಂದ ಇಲ್ಲಿನ ರೈತರು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಹಸಿ ಶುಂಠಿಗೆ ಬೆಲೆ ಇಲ್ಲದ ಕಾರಣ ಕೆಲವರು ಒಣಶುಂಠಿ ಮಾಡಿ, ಗಂಧಕ ಬಳಸುತ್ತಿದ್ದಾರೆ.

ಹೊಸನಗರ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಶುಂಠಿ ವಹಿವಾಟು ನಡೆಸುವ ವ್ಯಾಪಾರಸ್ಥರ ಸಂಖ್ಯೆ 500ಕ್ಕೂ ಅಧಿಕವಿದೆ. ಹಳ್ಳಿಗಳಲ್ಲಿ ನೂರಾರು ಒಣಶುಂಠಿ ಕಣಗಳಿವೆ. ಇಲ್ಲಿ ನಿತ್ಯ ಸಾವಿರಾರು ಮಹಿಳೆಯರು ಮತ್ತು ಕೃಷಿ ಕಾರ್ಮಿಕರು ಕಾರ‍್ಯನಿರ್ವಹಿಸುತ್ತಾರೆ.

ಒಂದು ಕ್ವಿಂಟಾಲ್‌ ಹಸಿ ಶುಂಠಿಗೆ 300 ಗ್ರಾಂ. ಗಂಧಕವನ್ನು ಬಳಸಲಾಗುತ್ತದೆ. ಇದರಿಂದ ತಿಕ್ಕಿದ ಹಸಿಶುಂಠಿ ಬೇಗನೆ ಒಣಗುತ್ತದೆ. ಜತೆಗೆ ಒಣಗಿದ ನಂತರ ಶುಂಠಿಗೆ ಡಿಲೆಕ್ಸ್‌ ಕಲರ್‌ ಬರುತ್ತದೆ. ಒಣ ಶುಂಠಿ ತಯಾರು ಮಾಡುವಾಗ ಎರಡು ಬಾರಿ ಗಂಧಕ ಬಳಸುತ್ತಾರೆ. ಬಳಿಕ ಒಣ ಶುಂಠಿ ಆಕರ್ಷಣೆ ಹೊಂದುತ್ತದೆ. ಹೀಗಾಗಿ ಅಧಿಕವಾಗಿ ಗಂಧಕ ಬಳಸಲಾಗುತ್ತಿದೆ ಎನ್ನುತ್ತಾರೆ ಶುಂಠಿ ಕಣದಲ್ಲಿ ಕೆಲಸ ಮಾಡುವವರೊಬ್ಬರು.

ಒಣ ಶುಂಠಿ ಕಣದಿಂದ ಸುಮಾರು ಎರಡು ಮೂರು ಕಿ.ಮೀ.ಅಂತರದಲ್ಲಿ ಶುಂಠಿ ಸಂಸ್ಕರಣೆಗೆ ಬಳಸುವ ಗಂಧಕದ ಹೊಗೆಯ ದುರ್ನಾತ ಸಹಿಸಲಸಾಧ್ಯವಾಗಿದೆ. ಶುಂಠಿಗೆ ಗಂಧಕ ಬಳಸುವುದರಿಂದ ಈಗಾಗಲೇ ಅನಾರೋಗ್ಯ ಪೀಡಿತರಿಂದ ದೂರುಗಳು, ಕೆಲವೆಡೆ ಗಲಾಟೆ, ವಿರೋಧಗಳು ವ್ಯಕ್ತವಾಗಿ ಪೊಲೀಸ್‌ ಠಾಣೆಯ ಕಟ್ಟೆ ಏರಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಗಮನಹರಿಸಿ, ತೊಂದರೆ ನಿವಾರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.ಗಂಧಕವನ್ನು ನಿಯಂತ್ರಿಸಲು ಪ್ರತ್ಯೇಕ ವಿಜಿಲೆನ್ಸ್ ಸ್ಕ್ವಾಡ್ ರಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಶುಂಠಿ ಕಣದ ಸುತ್ತಮುತ್ತಲಿನ ಪರಿಸರದಲ್ಲಿ ಗಂಧಕದ ಹೊಗೆಯಿಂದ ವಾತಾವರಣ ಕಲುಷಿತಗೊಂಡು ಆರೋಗ್ಯದಲ್ಲಿ ತೀವ್ರ ಪರಿಣಾಮ ಎದುರಿಸುವಂತಾಗಿದೆ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ ರೈತರು, ನಾಗರಿಕರ ದೂರು ನೀಡಿದ ಮೇರೆಗೆ ಅಧಿಕಾರಿಗಳು ಶುಂಠಿ ಕಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಗಂಧಕದ ಬಳಕೆಯಿಂದಾಗಿ ಉಂಟಾಗುವ ದುಷ್ಪರಿಣಾಮ ಬಗ್ಗೆ ವರದಿ ತಯಾರಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನೀಡಿದ್ದಾರೆ. ಆದರೂ ಇಲಾಖೆಯ ವರದಿ ಧಿಕ್ಕರಿಸಿ ಪುನಃ ಒಣಶುಂಠಿ ಕಣ ಮಾಡಿದ್ದಾರೆ.

ಒಣಶುಂಠಿಗೆ ಬಳಸುವ ಗಂಧಕದ ಹೊಗೆಯ ಸೇವನೆಯಿಂದ ಹಲವರಲ್ಲಿ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಹಾಗೂ ರಕ್ತ ಹೀನತೆ ಕಾಣಿಸಿಕೊಳ್ಳುವುದರೊಂದಿಗೆ ವಿಚಿತ್ರ ರೋಗ ಹರಡುವ ಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಾರೆ.

#ಜನಹಿತಕ್ಕಾಗಿ

– ರಫ಼ಿ ರಿಪ್ಪನ್‌ಪೇಟೆ

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *

Exit mobile version