ಕೊಡಚಾದ್ರಿ ಮಹಿಳಾ ಸೊಸೈಟಿಯಲ್ಲಿ ಲಕ್ಷಾಂತರ ರೂ ಅವ್ಯವಹಾರ – ವ್ಯವಸ್ಥಾಪಕಿಯ ಬಂಧನ
ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕೊಡಚಾದ್ರಿ ಮಹಿಳಾ ಸೌಹಾರ್ಧ ಪತ್ತಿನ ಸಹಕಾರಿ ಸಂಘದಲ್ಲಿ ರೂ. 31,59,164/-ರೂ ಅವ್ಯವಹಾರ ನಡೆದಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸೊಸೈಟಿಯ ವ್ಯವಸ್ಥಾಪಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ರಿಪ್ಪನ್‌ಪೇಟೆ ನಿವಾಸಿ ಪವಿತ್ರಾ ಎನ್ ಬಂಧಿತ ಆರೋಪಿಯಾಗಿದ್ದಾರೆ.
ಕೊಡಚಾದ್ರಿ ಮಹಿಳಾ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಮುಖ್ಯ ಶಾಖೆ ತೀರ್ಥಹಳ್ಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿತಾ ರವರು ದಾಖಲಿಸಿದ ದೂರಿನನ್ವಯ ಪವಿತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.ಶಾಖೆಗೆ ಸಂಬಂಧಿಸಿದ ವ್ಯವಹಾರದ ಯಾವುದೇ ನಗದು ಹಣವನ್ನು ದಿನದ ಅಂತ್ಯದಲ್ಲಿ ಅಥವಾ ಮಾರನೇ ದಿನ ಸಂಸ್ಥೆಯ ಖಾತೆಯಿರುವ ರಿಪ್ಪನ್ ಪೇಟೆಯ ಎಸ್.ಡಿ.ಸಿ.ಸಿ ಬ್ಯಾಂಕಿನ ಖಾತೆಗೆ ಜಮಾ ಮಾಡಬೇಕಾಗಿರುತ್ತದೆ. ಶಾಖೆಯಿಂದ ಸಾಲ ವಿತರಿಸಿದಲ್ಲಿಯೂ ಸಂಸ್ಥೆಯ ಎಸ್.ಡಿ.ಸಿ.ಸಿ ಬ್ಯಾಂಕಿನ ಚೆಕ್ ಮೂಲಕ ಹಣವನ್ನು ತೆಗೆಯಬೇಕಾಗಿರುತ್ತದೆ.ಆದರೆ ನಿಯಮಗಳನ್ನೆಲ್ಲಾ ಉಲ್ಲಂಘಿಸಿ ಸಾರ್ವಜನಿಕರ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವುದಾಗಿ ದೂರು ಸಲ್ಲಿಸಿದ್ದಾರೆ.
ಸಂಘದ ಕೆಲವೊಂದು ಸದಸ್ಯರಲ್ಲಿ ಪವಿತ್ರ ಎನ್ ತನ್ನ ಸ್ವಂತದ ಖಾತೆಗೆ ಯುಪಿಐ ಮೂಲಕ ಹಣ ಹಾಕಿಸಿಕೊಂಡು ಸದಸ್ಯರಿಗೆ ಅವರ ಸಾಲಕ್ಕೆ ಜಮಾ ತೆಗೆದುಕೊಳ್ಳುವುದಾಗಿ ತಿಳಿಸಿರುವುದಾಗಿ ಹೇಳಿರುತ್ತಾರೆ. ಇನ್ನೂ ಕೆಲವು ಸದಸ್ಯರು ಸಂಸ್ಥೆಯಲ್ಲಿ ಯಾವುದೇ ಸಾಲವನ್ನು ಪಡೆದಿರುವುದಿಲ್ಲವೆಂದು ತಿಳಿಸಿದ್ದು, ಅವರ ಹೆಸರಿನಲ್ಲಿ ಸಾಲದ ಖಾತೆ ಸೃಷ್ಟಿಸಿ ಅದರಿಂದ ಹಣ ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ಶಾಖೆಗೆ ಬಂದ ಸದಸ್ಯರಿಂದ ಹಣ ಪಡೆದು ಅದನ್ನು ನಗದು ಜಮಾ ತೆಗೆದುಕೊಳ್ಳದೆ ಸಂಸ್ಥೆಯ ಖಾತೆಗೆ ಜಮಾ ಮಾಡದೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿರುತ್ತದೆ. ಅಲ್ಲದೇ ರಿಪ್ಪನ್ ಪೇಟೆ ಶಾಕೆಯ ಸದಸ್ಯರಲ್ಲಿ ಸುಮಾರು 60-70 ಸಾಲಗಳನ್ನು ದಾಖಲೆ ಇಲ್ಲದೆ ವಿತರಿಸಲಾಗಿದ್ದೂಇದರಲ್ಲಿ ಹಿಂದಿನ ಆಡಳಿತ ಮಂಡಳಿಯವರು ಶಾಮಿಲಾಗಿರುವುದು ಕಂಡುಬಂದಿರುತ್ತದೆ. 2022-23 ರ ಸಾಲಿನಲ್ಲಿ ಸಾಲ ಪಡೆದು ತೀರುವಳಿ ಮಾಡಿರುವ ಸದಸ್ಯರ ಸಂಭಂದಿಸಿದ ವೈಯಕ್ತಿಕ ದಾಖಲೆಗಳನ್ನು ಅವರಿಗೆ ಹಿಂದಿರುಗಿಸದೆ 2023-24 ನೇ ಸಾಲಿನಲ್ಲಿ ಅದೇ ದಾಖಲೆಗಳನ್ನು ಬಳಿಸಿಕೊಂಡು ಸಾಲ ಸೃಷ್ಟಿಸಿ ಸಂಸ್ಥೆಯ ಹಣವನ್ನು ಲಪಟಾಯಿಸಲಾಗಿರುತ್ತದೆ. ಸಂಸ್ಥೆಯ ಸರ್ವಜನಿಕ ಹಣವಾಗಿದ್ದು, ಸಾರ್ವಜನಿಕರ ರೂ. 31,59,164/- ಹಣವನ್ನು ಮೋಸದಿಂದ ಲಪಟಾಯಿಸಿ ಆ ಉದ್ದೇಶಕ್ಕಾಗಿಯೇ ದಾಖಲೆಗಳನ್ನು ತಿದ್ದಿ, ಸೃಷ್ಟಿಸಿ, ಸಂಸ್ಥೆಯ ರಶೀದಿ ಪುಸ್ತಕ ಸೀಲು ವಗೈರೆ ದಾಖಲೆಗಳನ್ನು ಬಳಸಿಕೊಂಡು ವೈಯಕ್ತಿಕ ಲಾಭಕ್ಕೆ ಉಪಯೋಗಿಸಿಕೊಂಡಿರುವ ಪವಿತ್ರ ಎನ್ ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ ಪವಿತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.