ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್, ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ..!


ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಿಲುವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಸುದೀರ್ಘ ವಾದ, ಪ್ರತಿವಾದದ ಬಳಿಕ ಪ್ರಕರಣದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾ. ನಾಗಪ್ರಸನ್ನ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಮತ್ತು ಭಾರತೀಯ ನ್ಯಾಯಸಂಹಿತೆ 218ರಡಿ ರಾಜ್ಯಪಾಲರು ನೀಡಿದ್ದ ಅಭಿಯೋಜನೆ ಮತ್ತು ತನಿಖೆಯ ಪೂರ್ವಾನುಮತಿಯನ್ನು ಎತ್ತಿ ಹಿಡಿದಿದ್ದಾರೆ.
17ಎ ಅಡಿ ಪೊಲೀಸ್ ಅಧಿಕಾರಿಯೇ ಪೂರ್ವಾನುಮತಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಡ್ಡಾಯ ನಿಯಮಗಳಿಲ್ಲ. ಖಾಸಗಿ ದೂರಿನ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರ ಬಳಸಿ ನಡೆಸಿರುವ ಪ್ರಕ್ರಿಯೆಗಳಲ್ಲಿ ದೋಷಗಳು ಕಂಡುಬಂದಿಲ್ಲ ಎಂದು ಪೀಠ ಹೇಳಿದೆ.
ಸಂವಿಧಾನದ 163 ನೇ ವಿಧಿಯಡಿ ರಾಜ್ಯಪಾಲರು ಸಂಪುಟದ ಸಲಹೆ ಆಧಾರಿತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರವನ್ನು ಬಳಸಿಯೂ ನಿರ್ಧಾರ ತೆಗೆದುಕೊಳ್ಳಬಹುದು.
ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಿಲ್ಲ ಎಂಬ ವಾದವನ್ನು ತಳ್ಳಿಹಾಕಿದೆ. ಯಾವ ರೀತಿಯ ವಿಚಾರಣೆ ಎಂಬುದನ್ನು ಕೆಳಹಂತದ ನ್ಯಾಯಾಲಯ ನಿರ್ಧರಿಸಬಹುದು. ಈವರೆಗೂ ರಾಜ್ಯಪಾಲರ ಅಭಿಯೋಜನೆ ಆಧರಿಸಿದ ಪ್ರಕ್ರಿಯೆಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಿದ ವೇಳೆ ಸಿದ್ದರಾಮಯ್ಯ ಅವರ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಎರಡು ವಾರಗಳ ತಡೆ ನೀಡುವಂತೆ ಮನವಿ ಮಾಡಿದರು. ನಾನೇ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ತೀರ್ಪಿನ ಪ್ರತಿ ಕೈ ಸೇರಲಿದೆ. ಮುಂದಿನ ಪ್ರಕ್ರಿಯೆಗಳನ್ನು ಅರ್ಜಿದಾರರು ಪಾಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ರಾಜ್ಯಪಾಲರ ಪೂರ್ವಾನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ರಾಜಕೀಯವಾಗಿ ಬಿರುಗಾಳಿಯೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ವಾದಗಳು ಕೇಳಿಬಂದ ವೇಳೆ ಹೈಕೋರ್ಟ್‌ನಿಂದ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ಸಿಗಬಹುದು ಎಂಬ ಅಂದಾಜುಗಳಿದ್ದವು. ಆದರೆ ಎಲ್ಲವೂ ಹುಸಿಯಾಗಿವೆ.
ಇಂದು ಬೆಳಿಗ್ಗೆಯಿಂದಲೂ ತೀರ್ಪಿಗಾಗಿ ಮುಖ್ಯಮಂತ್ರಿ ಮತ್ತು ಅವರ ತಂಡ ತೀವ್ರ ಕುತೂಹಲದಿಂದ ನಿರೀಕ್ಷಿಸಿತ್ತು. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಕೆಳಹಂತದ ನ್ಯಾಯಾಲಯಕ್ಕೆ ತನ್ನ ವಿಚಾರಣೆಯನ್ನು ಮುಂದುವರೆಸಲು ಅವಕಾಶ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಲು ಅವಕಾಶ ಸಿಕ್ಕಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ.