ನಕಲಿ ದಾಖಲೆ ಸೃಷ್ಠಿಸುತ್ತಿದ್ದ ವ್ಯಕ್ತಿಯ ಮನೆಯಲ್ಲಿ 48 ನಕಲಿ ಸೀಲ್, ನೂರಾರು ನಕಲಿ ಹಕ್ಕುಪತ್ರ ಪತ್ತೆ, ಆರೋಪಿ ವಿರುದ್ಧ ಪ್ರಕರಣ
ಹೊಸನಗರ; ನಕಲಿ ಹಕ್ಕುಪತ್ರ ತಯಾರಿಸಿ, ಜನರನ್ನು ವಂಚಿಸುತ್ತಿದ್ದ ಪ್ರಕರಣವೊಂದನ್ನು ತಹಸೀಲ್ದಾರ್ ಎಚ್.ಜೆ.ರಶ್ಮಿ ಬೇಧಿಸಿದ್ದಾರೆ.
ಹೊಸನಗರ ತಾಲೂಕಿನ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೆಕೊಪ್ಪದ ರಾಜೇಂದ್ರ ಎಂಬಾತ ನಕಲಿ ಹಕ್ಕುಪತ್ರ ಹಾಗು ಸರಕಾರಿ ದಸ್ತಾವೇಜುಗಳ ನಕಲಿ ದಾಖಲೆ ಸೃಷ್ಠಿಸಿ ಮಾರುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದರು.
ಈ ವೇಳೆ ಆರೋಪಿಯ ಮನೆಯಲ್ಲಿ 48 ವಿವಿಧ ಸೀಲ್ ನೂರಾರು ನಕಲಿ ಹಕ್ಕುಪತ್ರಗಳು, ಹಕ್ಕುಪತ್ರ ಮುದ್ರಿಸುವ ಕಾಗದ, ನಕಲಿ ಸರಕಾರಿ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ಣಾಟಕ ಬ್ಯಾಂಕ್, ಉಪನೊಂದಣಾಧಿಕಾರಿಗಳ ಕಛೇರಿ, ತಹಸೀಲ್ದಾರ್, ತಾಲೂಕು ಕಛೇರಿ, ನ್ಯಾಯಾಲಯ, ವಿವಿಧ ಗ್ರಾಮ ಪಂಚಾಯಿತಿ ಕಛೇರಿಗಳ ನಕಲಿ ಮೊಹರು ಪತ್ತೆಯಾಗಿವೆ. ಅಲ್ಲದೇ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ಸಮಯದಲ್ಲಿ ಪಿಎಸ್‌ಐ ಶಂಕರಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಕಂದಾಯ ಇಲಾಖೆಯ ಶಿರಸ್ತೆದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಆಂಜನೇಯ, ಗ್ರಾಮ ಲೆಕ್ಕಾಧಿಕಾರಿ ರೇಣುಕಯ್ಯ, ಚಿರಾಗ್, ನಾಗಪ್ಪ, ಅಮ್ಜದ್ ಖಾನ್, ಶಿವಪ್ಪ ಅಶೋಕ ಇನ್ನೂ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.
ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ನಕಲಿ ಹಕ್ಕುಪತ್ರಗಳು ಸೇರಿದಂತೆ ಕೆಲವು ದಸ್ತಾವೇಜುಗಳು ಹರಿದಾಡುತ್ತಿರುವ ಕುರಿತು ಆಗಾಗ್ಗೆ ಆರೋಪಗಳು ಕೇಳಿಬರುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಾರ್ವಜನಿಕರಿಂದ ಸಾವಿರಾರು ರೂ. ಹಣ ಪಡೆದು ನೈಜ ದಾಖಲೆ ಎಂದು ನಂಬಿಸಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಯು ಅಮಾಯಕ ಜನರಿಂದ ಪ್ರತಿ ಹಕ್ಕುಪತ್ರಕ್ಕೆ 25 ಸಾವಿರ ರೂ. ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.