ಮುಮ್ತಾಜ್ ಬೇಗಮ್‌ರ ‘ಸ್ವಾತಂತ್ರ್ಯದ ಕಹಳೆ’ಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಮಂಗಳೂರು : ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2019ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ದಿವಂಗತ ಮುಮ್ತಾಜ್ ಬೇಗಮ್ (73)‌ರವರ ‘ಸ್ವಾತಂತ್ರ್ಯದ ಕಹಳೆ’ ಕೃತಿ ಆಯ್ಕೆಯಾಗಿದೆ.

ಖತಾರ್‌ನಲ್ಲಿರುವ ಯುನೆಸ್ಕೋದ ಆರ್ಥಿಕ ಹಾಗೂ ಆಡಳಿತ ಸಹಾಯಕರಾಗಿ, ದುಬೈನ ಅಲ್ ಮೀರ್ ಸಂಸ್ಥೆ ಮತ್ತು ಫ್ಯೂಜಿ ಗಾರ್ಮೆಂಟ್ಸ್’ನ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಮುಮ್ತಾಜ್ ಬೇಗಮ್ ವಿದ್ಯಾರ್ಥಿ ದೆಸೆಯಲ್ಲೇ ಬರವಣಿಗೆಯ ಹವ್ಯಾಸ ಮೈಗೂಡಿಸಿಕೊಂಡಿದ್ದು, ನಾಡಿನ ಅನೇಕ ದೈನಿಕ ಮತ್ತು ನಿಯತಕಾಲಿಕಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.

‘ಅವ್ಯಕ್ತ’ ಮತ್ತು ‘ಅಂಕುರ’ (ಕಥಾ ಸಂಕಲನ), ‘ಪರದೇಶಿ’ (ಧಾರವಾಹಿ-ತರಂಗ), ‘ವರ್ತುಲ’ ಮತ್ತು ‘ಬಂದಳಿಕೆ’ (ಕಾದಂಬರಿ), ‘ಚಿಂಪಿ’ (ಮಕ್ಕಳ ಸಾಹಿತ್ಯ), ‘ಸರ್ವ ಋತುಗಳೂ ನಿನಗಾಗಿ’ (ಕವನ ಸಂಕಲನ) ‘ಟು ದಿ ಅನ್‌ನೌನ್ ಡೆಸ್ಟಿನೇಶನ್’ (ಇಂಗ್ಲಿಷ್ ಕಾದಂಬರಿ) ಇವರ ಪ್ರಕಟಿತ ಕೃತಿಗಳು. ಗುಜರಾತ್‌ನಲ್ಲಿ ವೈದ್ಯೆಯಾಗಿರುವ ಮಗಳ ಜೊತೆಗಿದ್ದ ಇವರು ತನ್ನ ‘ಸೂರ್ಯಾಸ್ತ’ ಕೃತಿಯ ಬಿಡುಗಡೆಗಾಗಿ ಊರಿಗೆ ಬಂದವರು 2021ರ ಮಾರ್ಚ್ ಕೊನೆಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ, ಎಪ್ರಿಲ್ 6ರಂದು ಕೋವಿಡ್‌ನಿಂದ ನಿಧನರಾದರು.

ಅತ್ತಿಮಬ್ಬೆ, ಚೆನ್ನಶ್ರೀ, ಕಿತ್ತೂರ ರಾಣಿ ಚೆನ್ನಮ್ಮ, ಬಸವ ಜ್ಯೋತಿ, ಹಿರಿಯ ನಾಗರಿಕರ ಸಾಹಿತ್ಯ ಸಾಧಕಿ, ಜಿಲ್ಲಾ ರಾಜ್ಯೋತ್ಸವ ಮತ್ತು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ ಮತ್ತು ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರದಂತಹಾ ಅನೇಕ ಗೌರವ, ಬಹುಮಾನಗಳು ಪ್ರಾಪ್ತವಾಗಿವೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಲಾಕ್‌ಡೌನ್ ಸಂಪೂರ್ಣ ತೆರವು ಬಳಿಕ ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 36 ಕೃತಿಗಳು ಬಂದಿದ್ದು, ಸಾಹಿತಿಗಳಾದ ಡಾ. ಹಸೀನಾ ಖಾದ್ರಿ, ಅಬ್ದುರ‍್ರಹ್‌ಮಾನ್ ಕುತ್ತೆತ್ತೂರು ಮತ್ತು ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *