ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕಜೇನಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಪ್ಪಿಗ ಹಾಗೂ ಕಲ್ಲುಗಟ್ಟ ಸಂಪರ್ಕ ರಸ್ತೆಯ ನಾರಾಯಣಯ್ಯ ಅವರ ಮನೆ ಹತ್ತಿರ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹತ್ತಿರದ ತಾವರೆಕೆರೆ ತುಂಬಿ ಕೋಡಿ ಹರಿದಿದ್ದು ಗದ್ದೆಗಳು ನೀರಿನಲ್ಲಿ ಮುಳುಗಿದ್ದು ಜನರು ಓಡಾಡುವ ಸಂಪರ್ಕ ರಸ್ತೆಯೂ ಸಹ ನೀರಿನಿಂದ ಜಲಾವೃತವಾಗಿದೆ.ಈ ಮಾರ್ಗದಲ್ಲಿ ಓಡಾಡುವ ಜನರು ಹಾಗೂ ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಪ್ರಕರಣಗಳು ನಡೆದಿವೆ.
ಈ ಸಂಪರ್ಕ ರಸ್ತೆ ಹಾಗೂ ಕೆರೆಯ ಕೋಡಿಯ ಸಮಸ್ಯೆಯ ಬಗ್ಗೆ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಚುನಾಯಿತ ಜನಪ್ರತಿನಿಧಿಗಳಿಗೆ ಈ ಭಾಗದ ಸಾರ್ವಜನಿಕರು ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.
ಈ ಮಳೆಗಾಲದ ಆರಂಭದಿಂದ ಇದುವರೆಗೆ ಬಂದ ಮಳೆಗೆ ಇಷ್ಟು ಹಾನಿಯಾದರೆ ಇನ್ನು ಬರಲಿರುವ ಬಾರಿ ಮಳೆ ಯಾವ ಅನಾಹುತ ತರುತ್ತದೆಯೋ ಎಂದು ರೈತಾಪಿ ಜನರು ಚಿಂತೆಗೀಡಾಗಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ,ಈ ಸಮಸ್ಯೆಯ ಬಗ್ಗೆ ತ್ವರಿತವಾಗಿ ಗಮನಹರಿಸಿ ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕಾದ ಅನಿವಾರ್ಯತೆ ಇದೆ.
ಅಧಿಕಾರಿವರ್ಗ ಜನಪ್ರತಿನಿಧಿಗಳು ಗ್ರಾಮಾಡಳಿತ ಇನ್ನು 15 ದಿವಸಗಳ ಒಳಗೆ ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಿ ಕೊಡದಿದ್ದರೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ನೊಂದ ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ವರದಿ: ರಾಮನಾಥ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..