ಮಧುಬಂಗಾರಪ್ಪ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ : ಆರ್ ಎಂ ಮಂಜುನಾಥಗೌಡ

ರಿಪ್ಪನ್ ಪೇಟೆ : ಜೆಡಿಎಸ್ ನ ಮಾಜಿ ಕಾರ್ಯಧ್ಯಕ್ಷರು ಹಾಗೂ ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪರವರು ತಮ್ಮ ಬೆಂಬಲಿಗರೊಂದಿಗೆ ಇದೆ ಜುಲೈ 30 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಗೆ ಸೇರಲಿದ್ದು, ಈ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಸಹಕಾರಿ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಆರ್ .ಎಂ.ಮಂಜುನಾಥಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ಇಂದು ಗ್ರಾಮ ಪಂಚಾಯಿತಿ ಸಭಾಭವನದ ಕುವೆಂಪು ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಧು ಬಂಗಾರಪ್ಪ ರವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗುವುದರಿಂದ ಅವರ ಬೆಂಬಲಿಗರು ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪರವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂದು ತಿಳಿಸಿದರು. 
ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಮನ್ವಂತರ ಪ್ರಾರಂಭವಾಗಲಿದೆ,ಅಂದು ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ್ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ನಾಯಕರಾದ ಸುರ್ಜೆವಾಲಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದು, ಇವರ ಸೇರ್ಪಡೆಯನ್ನು ಅತ್ಯಂತ ತುಂಬು ಹೃದಯದಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಂಘಟನಾತ್ಮಕ ಕೆಲಸ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯು ಸೇರಿದಂತೆ ಬೇರೆ ಬೇರೆ ಪಕ್ಷದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮತ್ತು ರೈತ ವಿರೋಧಿ ಮುಂತಾದ ನಿಲುವುಗಳಿಂದ ಕಾರ್ಯಾಚರಿಸುತ್ತಿದ್ದು, ಇದರಿಂದ ಜನರು ಪರಿತಪಿಸುವಂತಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಪಂ ಮಾಜಿ ಸದಸ್ಯ ಬಿಪಿ ರಾಮಚಂದ್ರ,ಅಮೀರ್ ಹಂಜಾ, ತಾಪಂ ಮಾಜಿ ಸದಸ್ಯ ಎಂಬಿ ಲಕ್ಷ್ಮಣಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ,ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್,ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಚಂದ್ರೇಶ್,ಆಸಿಫ್,ಮಧುಸೂದನ್, ಶ್ರೀಮತಿ ಧನಲಕ್ಷ್ಮಿ ಶ್ರೀಮತಿ ಮಹಾಲಕ್ಷ್ಮಿ ಅಣ್ಣಪ್ಪ, ಶ್ರೀಮತಿ ಸಾರಾಬಿ, ಶ್ರೀಮತಿ ಅನುಪಮಾ ಹಾಗೂ ಕಾಂಗ್ರೆಸ್ ಮುಖಂಡರಾದ ಫ್ಯಾನ್ಸಿ ರಮೇಶ್, ಲೋಕಪ್ಪಗೌಡ ಇನ್ನಿತರರು ಹಾಜರಿದ್ದರು.




ವರದಿ: ರಾಮನಾಥ್ ರಿಪ್ಪನ್ ಪೇಟೆ





ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..












Leave a Reply

Your email address will not be published. Required fields are marked *