ರಿಪ್ಪನ್ ಪೇಟೆ: ಅನೈತಿಕ ಚಟುವಟಿಕೆಯ ತಾಣವಾದ ಸ್ತ್ರೀಶಕ್ತಿ ಸಮುದಾಯ ಭವನ.


ರಿಪ್ಪನ್ ಪೇಟೆ: ಪಟ್ಟಣಕ್ಕೆ  ಹೊಂದಿಕೊಂಡಂತೆ ಇರುವ ದೊಡ್ಡಿನಕೊಪ್ಪ ಬಡಾವಣೆಯಲ್ಲಿರುವ ಸ್ತ್ರೀಶಕ್ತಿ ಸಮುದಾಯಭವನ ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದೆ.ಲಕ್ಷಾಂತರ ರೂಪಾಯಿ ಮೊತ್ತದ ಅನುದಾನದಲ್ಲಿ ತಲೆಯೆತ್ತಿ ನಿಂತ  ಸ್ತ್ರೀ ಶಕ್ತಿ ಸಮುದಾಯಭವನ ಇದೀಗ ಪಾಳುಬಿದ್ದು ಹಾಗೂ ಪುಡಾರಿಗಳ ನೆಚ್ಚಿನ ಅನೈತಿಕ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

2011-12ರಲ್ಲಿ ಅಂದಿನ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣರವರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀ ಶಕ್ತಿ ಸಮುದಾಯ ಭವನವನ್ನು  ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿತ್ತು.


ಈಗ ಸ್ತ್ರೀಶಕ್ತಿ ಸಮುದಾಯ ಭವನದ ಸುತ್ತ ಮುತ್ತ ಗಿಡ ಗಂಟೆಗಳು, ಪೊದೆಗಳು ಬೆಳೆದಿದ್ದು ಅನೈತಿಕ ಚಟುವಟಿಕೆಗೆ ಕೈ ಬೀಸಿ ಕರೆಯುವಂತಿದೆ.ಲಕ್ಷಾಂತರ ರೂ ಮೌಲ್ಯದ ಪೀಠೋಪಕರಣಗಳು ನಿರ್ವಹಣೆ ಇಲ್ಲದೆ ಗೆದ್ದಲು ಹಿಡಿಯುತ್ತಿದೆ.

ಇಲ್ಲಿಗೆ ಕೂಗಳತೆ ದೂರದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು,ಈ ಸಮುದಾಯ ಭವನದ ಬಳಿ ಕಾಣಸಿಗುವ ಮದ್ಯ ಕುಡಿದು ಬಿಸಾಡಿದ ಬಾಟಲ್ ಗಳು ಮುಂದೆ ಆಗುವ ಭಯಂಕರ ಅನಾಹುತದ ಬಗ್ಗೆ ಸ್ಪಷ್ಟವಾಗಿ ಸೂಚಿಸುವಂತಿದೆ.


ಈ ಸಂಧರ್ಭದಲ್ಲಿ ಮಾತನಾಡಿದ ರಿಪ್ಪನ್ ಪೇಟೆ ಮಾಜಿ ಗ್ರಾಪಂ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ನಮ್ಮ ಆಡಳಿತ ಸಮಯದಲ್ಲಿ ಶಾಸಕರ ಸಹಕಾರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಎಲ್ಲಾ ಜನರಿಗೆ ಉಪಕಾರಿಯಾಗಲು ಈ ಸ್ತ್ರೀ ಶಕ್ತಿ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು ಆದರೆ ಇದರ ಸರಿಯಾದ ನಿರ್ವಹಣೆ ಇಲ್ಲದೇ ಈಗ ಅನೈತಿಕ ಚಟುವಟಿಕೆಯ ತಾಣವಾಗಿರುವು ದುರದೃಷ್ಟಕರ ಎಂದರು.

ಇಲ್ಲಿನ ಸುತ್ತಮುತ್ತ ವಾಸವಿರುವ ನಾಗರಿಕರಿಗೆ ಶಾಂತಿಭಂಗ ಉಂಟಾಗುತ್ತಿದೆ ಹಾಗೂ ಮದ್ಯದ ಅಮಲಿನಲ್ಲಿ ಸಮುದಾಯ ಭವನದ ಕಿಟಕಿ ಹಾಗೂ ಬಾಗಿಲುಗಳನ್ನು ಕಿಡಿಗೇಡಿಗಳು ಒಡೆದು ಜಖಂಗೊಳಿಸಿದ್ದಾರೆ. ಸಮುದಾಯ ಭವನದ ಪಕ್ಕದಲ್ಲಿರುವ ರಸ್ತೆಯಲ್ಲಿ ಒಂಟಿಯಾಗಿ ವಿದ್ಯಾರ್ಥಿಗಳು,ಮಹಿಳೆಯರು ಸಂಚರಿಸಲು ಭಯ ಪಡಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಈ ಸಮುದಾಯ ಭವನವನ್ನು ಪೊದೆಗಳಿಂದ ರಕ್ಷಿಸಿ, ಸಮುದಾಯ ಭವನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ರಿಪ್ಪನ್ ಪೇಟೆ ಮಾಜಿ ಗ್ರಾ ಪಂ ಸದಸ್ಯ ಕೆರೆಹಳ್ಳಿ ರವೀಂದ್ರ ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಜನರ ಸದುಪಯೋಗಕ್ಕಾಗಿ ನಿರ್ಮಾಣಗೊಂಡ ಈ ಸಮುದಾಯ ಭವನವು ಅನೈತಿಕ ಚಟುವಟಿಕೆಯ ತಾಣವಾಗಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಟ್ಟಡವನ್ನು ನವೀಕರಿಸಿ ಸೂಕ್ತ ರೀತಿಯಲ್ಲಿ ಸರ್ಕಾರದ ಆಸ್ತಿಯನ್ನು ಬಳಸಿಕೊಳ್ಳಬೇಕಾಗಿದೆ.

                               

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *