ದೇವೇಗೌಡರು ಹಾಗೂ ಕುಮಾರಸ್ವಾಮಿ ಬೆಂಬಲ ಇರುವ ತನಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ : ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬೆಂಬಲ ಇರುವ ತನಕ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.

 ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರಕ್ಕೆ ಅವರ ಪಕ್ಷದಿಂದಲೇ ಬಹಳಷ್ಟು ವಿರೋಧವಿದೆ. ಈಗಾಗಲೇ ಭಿನ್ನಮತೀಯರ ಚಟುವಟಿಕೆ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ ಕೆಲವು ಮಂತ್ರಿಗಳು ಹಾಗೂ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರ ಸರ್ಕಾರಕ್ಕೆ ನಮ್ಮ ಪೂರ್ಣ ಸಹಕಾರ ಹಾಗೂ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಘೋಷಣೆ ಮಾಡಿರುವುದರಿಂದ  ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ಪಕ್ಷದ ಬೆಂಬಲ ಶ್ರೀರಕ್ಷೆಯಾಗಿದೆ ಎಂದು ಅವರು ಹೇಳಿದರು.

 ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಈಗಾಗಲೇ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ. ಪೆಟ್ರೋಲ್-ಡೀಸೆಲ್ ಹಾಗೆಯೇ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಇದರಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ದಿಂದ ಈಗಾಗಲೇ ಜನರು ಆರ್ಥಿಕ  ಸಂಕಷ್ಟದಲ್ಲಿ ಸಿಲುಕಿದ್ದಾರೆ ಈ ನಡುವೆ ಅವರುಗಳು ಬದುಕುವುದೇ ದುಸ್ತರವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಅವರು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾನಗೋಡು  ಉಮಾಕರ.  ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಷರೀಫ್, ರಿಪ್ಪನ್ ಪೇಟೆ ಗ್ರಾಮಪಂಚಾಯಿತಿ ಸದಸ್ಯರಾದ,ಮಧುಸೂದನ್, ಆಶಿಫ್, ಗಣಪತಿ ಧನಲಕ್ಷ್ಮೀ ಕಾಂಗ್ರೆಸ್ ಮುಖಂಡರಾದ ಅಮಿರ್ ಹಂಜಾ,ಸಣ್ಣಕ್ಕಿ ಮಂಜುನಾಥ್ ಲಕ್ಷ್ಮಿಕಾಂತ್ ಹಾಗೂ ಇನ್ನಿತರರಿದ್ದರು.


ವರದಿ : ಸಬಾಸ್ಟಿನ್ ಮ್ಯಾಥ್ಯೂಸ್‌ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *