ಶಿಕಾರಿಪುರ : ಕಾರ್ಯಕರ್ತರ ಸಭೆ ಹಿನ್ನೆಲೆಯಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ತವರು ಕ್ಷೇತ್ರ ಶಿಕಾರಿಪುರದಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.
ಇಂದು ಕುಮದ್ವತಿ ಕಾಲೇಜಿನಲ್ಲಿ ನಡೆದ ಕಾರ್ಯಕರ್ತರ ಸಭೆಗೆ ಆಗಮಿಸಿದ ಯಡಿಯೂರಪ್ಪನವರಿಗೆ ಕಾರ್ಯಕರ್ತರು, ಅಭಿಮಾನಿಗಳು ಪೂರ್ಣಕುಂಭದ ಸ್ವಾಗತ ನೀಡಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಡೊಳ್ಳು, ವೀರಗಾಸೆಯ ಮೂಲಕ ಕಾಲೇಜಿನ ಮುಖ್ಯದ್ವಾರದಿಂದ ಸಭಾಂಗಣದವರೆಗೂ ಮೆರವಣಿಗೆ ನಡೆಸಿದರು.
ಇಲ್ಲಿನ ಸಭಾಂಗಣದಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ಮುಂಬರುವ ಚುನಾವಣೆಯ ದೃಷ್ಟಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಬೇಕಿದೆ. ಶಿಕಾರಿಪುರ ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿಗೆ ಉತ್ತಮ ವಾತಾವರಣವಿದೆ. ಮುಂದೆ 150ಕ್ಕೂ ಹೆಚ್ಚು ಸೀಟು ಲಭ್ಯವಾಗಿ ಬಿಜೆಪಿ ಸ್ವಂತಬಲದ ಮೇಲೆ ಆಡಳಿತ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷಕ್ಕೆ ದುಡಿಯಬೇಕು ಎಂದು ಬಿಎಸ್ವೈ ಕರೆ ಕೊಟ್ಟರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ಶಿಕಾರಿಪುರದ ಬಿಜೆಪಿ ಕಾರ್ಯಕರ್ತರು ರಾಜಕೀಯ ಬೇಸಾಯವನ್ನು ಕಾಲಕಾಲಕ್ಕೆ ತಕ್ಕಂತೆ ಮಾಡಿ ಉತ್ತಮ ಬೆಳೆಯನ್ನು ಕಳೆದ ಒಂದು ದಶಕದಿಂದ ತೆಗೆಯುತ್ತಿದ್ದಾರೆ. ಇಂತಹ ಕಾರ್ಯಕರ್ತರು ಕರ್ನಾಟಕದಲ್ಲಿ ಮತ್ತೆಲ್ಲೂ ಸಿಗಲ್ಲ ಎಂದರು.