ಶಿವಮೊಗ್ಗ: ವಿನೋಬನಗರದಲ್ಲಿ ಸ್ಮಾರ್ಟ್‌ಸಿಟಿ ಅವ್ಯವಸ್ಥೆಗೆ ಇಂದು ಬೆಳಗ್ಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರೊಬ್ಬರು ಬಲಿಯಾಗಿದ್ದಾರೆ.
ಕೃಷಿ ನಗರದ ನಿವಾಸಿ ರಂಗನಾಥ(47) ಮೃತರು. ಗೋಪಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿದ್ದರು.ಇಂದು ಬೆಳಗ್ಗೆ ಮನೆಯಿಂದ ಶಾಲೆಗೆ ಬೈಕ್‌ನಲ್ಲಿ ತೆರಳುತಿದ್ದರು. ಈ ವೇಳೆ ನೂರು ಅಡಿ ರಸ್ತೆಯ ಮೈಸೂರು ಬ್ಯಾಂಕ್ ಎದುರು ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದು, ಮದರಿಪಾಳ್ಯದ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿನೋಬನಗರದ ಕಳೆದ ಮೂರು ವರ್ಷಗಳಿಂದ ಕುಂಟುತ್ತಾ ಕಾಮಗಾರಿ ಸಾಗಿದ್ದು, ಈ ಭಾಗದಲ್ಲಿ ಪದೇಪದೆ ಅಪಘಾತ ಪ್ರಕರಣ ಸಂಭವಿಸುತ್ತಲೇ ಇದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ನಡೆಯುತ್ತಿದ್ದು,ಒಂದೇ ಮಾರ್ಗದಲ್ಲಿವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕಾಮಗಾರಿ ವಿಳಂಬದಿಂದಲೇ ಅಪಘಾತ ಪ್ರಕರಣ ಹೆಚ್ಚಾಗುತ್ತಿದೆ ಎಂದು ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.