ಕೆರೆಯ ಮೀನು ತಿಂದು ಇಬ್ಬರು ಸಾವು – ಅಷ್ಟಕ್ಕೂ ನಡೆದಿದ್ದೇನು..??
ಕೆರೆ ಮೀನು ತಿಂದು ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.
ಬಸವಹಳ್ಳಿ ಗ್ರಾಮದ ರವಿಕುಮಾರ್ (46), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈವಿಗಳು.
ಮೃತರು ಮಾತ್ರವಲ್ಲದೇ ಈ ಮೀನುಗಳನ್ನು ತಿಂದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅರಕಲಗೂಡು ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ಬೇಸಿಗೆಗೆ ಗ್ರಾಮದ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. ಆದರೆ ಕೆರೆಯಲ್ಲಿ ಕೆಸರು ತುಂಬಿಕೊಂಡಿದ್ದು, ಕೆಸರಿನಲ್ಲಿ ಮೀನುಗಳಿದ್ದವು.
ಕೆರೆಯಲ್ಲಿ ನೀರು ಖಾಲಿಯಾಗಿ ಮೀನುಗಳನ್ನು ಹಿಡಿಯಲು ಸುಲಭವಾದ ಕಾರಣ ಗ್ರಾಮಸ್ಥರು ಕೆಸರಿನಲ್ಲಿದ್ದ ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದರು. ಮೀನುಗಳನ್ನು ತಿಂದ ಅನೇಕರಿಗೆ ವಾಂತಿ, ಭೇದಿ ಆರಂಭವಾಗಿದೆ. ಸುಮಾರು 15ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು.
ಕೂಡಲೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಇಬ್ಬರು ಸಾವನ್ನಪ್ಪಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸವನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.