2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ನೂತನ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾಳೆ. ಮಿಸ್ ಯೂನಿವರ್ಸ್ 2021 ಸ್ಪರ್ಧೆಯಲ್ಲಿ ನಟಿ ಮತ್ತು ಮಾಡೆಲ್ ಹರ್ನಾಜ್ ಕೌರ್ ಸಂಧು ಅವರನ್ನು ಸ್ಪರ್ಧೆಯ ವಿಜೇತೆ ಎಂದು ಘೋಷಿಸುತ್ತಿದ್ದಂತೆ ಭಾರತದ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರಾಡಿದೆ.
ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ಡಿಸೆಂಬರ್ 12(ಭಾನುವಾರ) ರಂದು ವಿಶ್ವ ಸುಂದರಿ ಸ್ಪರ್ಧೆ ನಡೆದಿದೆ. ಮಿಸ್ ಯೂನಿವರ್ಸ್ 2021 ಹರ್ನಾಜ್ ಸಂಧು ಪಂಜಾಬ್‌ನ ಚಂಡೀಗಢ ಮೂಲದ ಮಾಡೆಲ್ ಆಗಿದ್ದಾರೆ.
ಭಾರತದ ಹರ್ನಾಜ್ ಸಂಧು ಹೊರತುಪಡಿಸಿ, ಪರುಗ್ವೆಯ ನಾಡಿಯಾ ಫೆರೇರಾ ಮೊದಲ ರನ್ನರ್ ಅಪ್, ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಇದು ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮದ 70ನೇ ಆವೃತ್ತಿಯಾಗಿತ್ತು.
70ನೇ ವಿಶ್ವ ಸುಂದರಿ ಕಾರ್ಯಕ್ರಮದಲ್ಲಿ ಪಂಜಾಬ್‌ನ 21 ವರ್ಷದ ಹರ್ನಾಜ್ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. 2000ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಗೆದ್ದ 21 ವರ್ಷಗಳ ನಂತರ ವಿಶ್ವ ಸುಂದರಿ ಕಿರೀಟವನ್ನು ಭಾರತಕ್ಕೆ ತಂದಿದ್ದಾರೆ.
ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ 2021 ಆಗಿ ರ‍್ಯಾಂಪ್‌ನಲ್ಲಿ ತನ್ನ ಅಂತಿಮ ನಡಿಗೆಯನ್ನು ಮಾಡಿದ್ದರಿಂದ ಇದು ಒಂದು ಅತಿ ವಾಸ್ತವಿಕ ಕ್ಷಣವಾಗಿತ್ತು.
ಮೊದಲ ಮೂರು ಸುತ್ತಿನ ಭಾಗವಾಗಿ ಸ್ಪರ್ಧಿಗಳಿಗೆ, “ನೀವು ಹೇಗೆ ವ್ಯವಹರಿಸಬೇಕು ಎಂಬುದನ್ನು ವೀಕ್ಷಿಸುವ ಯುವತಿಯರಿಗೆ ನೀವು ಏನು ಸಲಹೆ ನೀಡುತ್ತೀರಿ. ಅವರು ಇಂದು ಎದುರಿಸುತ್ತಿರುವ ಒತ್ತಡಗಳು ಏನು?,” ಎಂದು ಕೇಳಲಾಯಿತು.
ಇದಕ್ಕೆ ಹರ್ನಾಜ್ ಸಂಧು ಉತ್ತರಿಸಿದ್ದು ಹೀಗೆ. “ಇಂದಿನ ಯುವಜನರು ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮನ್ನು ತಾವು ನಂಬುವುದು. ನಿಮ್ಮನ್ನು ನೀವು ಅನನ್ಯರು ಎಂದು ತಿಳಿದುಕೊಳ್ಳುವುದು ನಿಮ್ಮನ್ನು ಸುಂದರವಾಗಿಸುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ”.
“ಹೊರಗೆ ಬನ್ನಿ, ನಿಮಗಾಗಿ ಮಾತನಾಡಿ, ಏಕೆಂದರೆ ನೀವು ನಿಮ್ಮ ಜೀವನದ ನಾಯಕರಾಗಿದ್ದೀರಿ. ನೀವು ನಿಮ್ಮದೇ ಧ್ವನಿ. ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೇನೆ ಮತ್ತು ಅದಕ್ಕಾಗಿಯೇ ನಾನು ಇಂದು ಇಲ್ಲಿ ನಿಂತಿದ್ದೇನೆ,” ಎಂದು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಇಂಡಿಯಾ 2021 ಕಿರೀಟವನ್ನು ಪಡೆದಿದ್ದರು. ಅವರು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ನಂತಹ ಅನೇಕ ಸ್ಪರ್ಧೆಯಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.
ಹರ್ನಾಜ್ ಕೌರ್ ಸಂಧು ಕುರಿತು:
ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಕೌರ್ ಸಂಧು, ಪಂಜಾಬ್‌ನ ಚಂಡೀಗಢದಿಂದ ಬಂದವರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದ್ದಾರೆ. ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ, ಹರ್ನಾಜ್ ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.
ಕೇವಲ 21ನೇ ವಯಸ್ಸಿನಲ್ಲಿ ಸಂಧು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಆದರೆ ಇದರ ಹೊರತಾಗಿಯೂ, ಅವರು ತಮ್ಮ ಅಧ್ಯಯನವನ್ನು ಬಿಡಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಶಾಲಾ ದಿನಗಳಲ್ಲಿ ಅವರು ತೆಳ್ಳಗಿದ್ದಾರೆಂದು ಅಪಹಾಸ್ಯಕ್ಕೊಳಗಾಗಿದ್ದರು. ಈ ಕಾರಣಕ್ಕೆ ಆಕೆ ಖಿನ್ನತೆಗೆ ಒಳಗಾಗಿದ್ದರು.
ಆದರೂ ಅಂತಹ ಸಮಯದಲ್ಲಿ ಕುಟುಂಬವು ಹರ್ನಾಜ್ ಕೌರ್ ಸಂಧುರನ್ನು ಬೆಂಬಲಿಸಿತು. ಹರ್ನಾಜ್ ಸಂಧುಗೆ ಆಹಾರ ಎಂದರೆ ತುಂಬಾ ಇಷ್ಟ. ಆದರೆ ಅದೇ ಸಮಯದಲ್ಲಿ ಅವರು ತನ್ನ ಫಿಟ್‌ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದ್ದರು.
2017ರಂದು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಮೊದಲ ಬಾರಿಗೆ ಪ್ರದರ್ಶನವನ್ನು ನೀಡಿದರು. ಅಂದಿನಿಂದ ಅವರ ಮಾಡೆಲಿಂಗ್ ಪಯಣ ಆರಂಭವಾಯಿತು. ಸಂಧುಗೆ ಕುದುರೆ ಸವಾರಿ, ಈಜು ಮತ್ತು ಪ್ರವಾಸ ತುಂಬಾ ಇಷ್ಟವಾದ ಹವ್ಯಾಸಗಳು.
ಚಂಡೀಗಢದ ಮಾಡೆಲ್ ಹರ್ನಾಜ್ ಸಂಧು ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 2017ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಶೀರ್ಷಿಕೆ ಸೇರಿವೆ.