ಗೃಹ ಸಚಿವರ ಗ್ರಾಮದಲ್ಲಿಯೇ ದಲಿತ ದಂಪತಿಗಳ ಮೇಲೆ ಕೆಲ ಕಿಡಿಗೇಡಿಗಳು ಅಡ್ಡಕಟ್ಟಿ ಥಳಿಸಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ನಡೆದಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರರ ತವರು ಕ್ಷೇತ್ರದಲ್ಲಿ ಕಳ್ಳತನ ದರೋಡೆ ಪ್ರಕರಣಗಳು ನಡೆದ ಬೆನ್ನಲ್ಲೇ ಈಗ ದುಷ್ಕರ್ಮಿಗಳು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮಾಡುವ ಯತ್ನಕ್ಕೂ ಕೈ ಹಾಕಿದ್ದಾರೆ ಎಂದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ?? ಇಲ್ಲವೋ ಎಂಬ ಪ್ರಶ್ನೆ ಮೂಡದೆ ಇರದು.
ಘಟನೆಯ ಹಿನ್ನಲೆ:
ನಿನ್ನೆ ಸಂಜೆ ತೀರ್ಥಹಳ್ಳಿ ತಾಲ್ಲೂಕಿನ ವಾಸಿ 26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಆನಾರೋಗ್ಯದ ಕಾರಣದಿಂದಾಗಿ ತೀರ್ಥಹಳ್ಳಿಯ ತಮ್ಮ ಪರಿಚಿತ ವೈದ್ಯರ ಬಳಿ ಹೋಗಿದ್ದು, ಆದರೆ ಅವರು ಸಿಗದ ಕಾರಣ ಹಳೆ ಔಷದಿ ಚೀಟಿಯನ್ನು ತೋರಿಸಿ ಔಷದಿಯನ್ನು ಖರೀದಿಸಿ ತನ್ನ ಗಂಡನೊಂದಿಗೆ ರಾತ್ರಿ 09:00 ಗಂಟೆಗೆ ಬಸ್ ನಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮ ಊರಿಗೆ ವಾಪಾಸ್ ಬಂದು ಬಸ್ ನಿಂದ ಇಳಿದು, ನಡೆದು ಕೊಂಡು ಹೋಗುತ್ತಿದ್ದಾಗ ಊರಿನ ಹತ್ತಿರ ಏಕಾಏಕಿ ದೇವರಗುಡಿ ಗ್ರಾಮದ ನಿವಾಸಿಗಳಾದ ಸಂಪತ್, ಆದರ್ಶ ಮತ್ತು ಇತರೆ 02 ಜನ ಅಪರಿಚಿತರು ಬಂದು ಅಡ್ಡಗಟ್ಟಿ ಆಕೆಯ ಗಂಡನಿಗೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದ್ದು ಆತನು ಪ್ರಜ್ಞಾಹೀನರಾಗಿರುತ್ತಾನೆ. ನಂತರ ಮಹಿಳೆಯ ಕೈ ಹಿಡಿದು ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಮಹಿಳೆಯು ಜೋರಾಗಿ ಕೂಗಿಕೊಂಡ ಶಬ್ದಕ್ಕೆ ಆಕೆಯ ಪತಿಯು ಎಚ್ಚರಗೊಂಡು ಆತನು ಸಹಾ ಜೋರಾಗಿ ಕೂಗಿದಾಗ ಆರೋಪಿಗಳೆಲ್ಲರೂ ಆಕೆಗೆ ನಿನ್ನನ್ನು ಅತ್ಯಾಚಾರ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಓಡಿಹೋಗಿರತ್ತಾರೆ.ನಂತರ ದಂಪತಿಗಳು ಇಂದು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಾಗಿ,ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದಂಪತಿಗಳು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0088/2022 ಕಲಂ 341, 323, 376, 354(A), 354(B), 506 ಸಹಿತ 34 ಐಪಿಸಿ ಹಾಗೂ ಕಲಂ 3 (1) (w) (i) (ii), 3 (2) (va) The SC & ST (POA) Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಸಂತ್ರಸ್ಥ ದಲಿತ ಮಹಿಳೆಯ ದೂರಿನಲ್ಲಿ ಏನಿದೆ????
ನಾನು ಮತ್ತು ನನ್ನ ಗಂಡ ಆರಗಾ ಗ್ರಾದ ಹರಿಜನ ಕಾಲೋನಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ.ನಮಗೆ ಆರೋಗ್ಯ ಸಮಸ್ಯೆ ಇದ್ದು ನಮ್ಮಿಬ್ಬರಿಗೆ ಈವರೆವಿಗೆ ಮಕ್ಕಳು ಆಗಿರುವುದಿಲ್ಲ, ನನ್ನ ಅನಾರೋಗ್ಯದ ಬಗ್ಗೆ ಆರಗದಲ್ಲಿರುವ ಸರ್ಕಾರಿ ವೈದ್ಯರಾದ ಡಾಕ್ಟರ್ ತೇಜಸ್ವಿಯವರು ಚಿಕಿತ್ಸೆ ನೀಡುತ್ತಿರುತ್ತಾರೆ, ದಿನಾಂಕ 01-01-2022 ರಂದು ಸಂಜೆ 7 ಗಂಟೆಗೆ ನನಗೆ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ನನ್ನ ಗ೦ಡ ದೇವೆಂದ್ರ ಇವರನ್ನು ಕರೆದುಕೊಂಡು ಆರಗಾ ಆಸ್ಪತ್ರೆಗೆ ಬಂದಿರುತ್ತೇವೆ.
ಅಲ್ಲಿ ವೈದ್ಯರು ಲಭ್ಯ ಇಲ್ಲದ ಕಾರಣ ತೀರ್ಥಹಳ್ಳಿಗೆ ಬಂದು ಪರಿಚಿತ ವೈದ್ಯರನ್ನು ಸಂಪರ್ಕಿಸಲು ಪ್ರಯಸ್ನಿಸುತ್ತೇವೆ. ಅವರುಸಿಗದಿರುವ ಕಾರಣ ಹಳೆ ಚೀಟಿ ತೋರಿಸಿ ಔಷಧಿ ಖರೀದಿಸಿ ಬಸ್ಸಿನಲಲಿ ಆರಗಾ ಕ್ಕೆ ಬಂದಿರುತ್ತೆವೆ. ರಾತ್ರಿ ಸುಮಾರು 9 ಗಂಟೆ ಸಮಯ ಆಗಿರುತ್ತದೆ, ಅರಗ ಗೇಟ್ನಲ್ಲಿ ಬಸ್ ಇಳಿದು ಹಾಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರಗಾ ಗೇಟ್ ನಿಂದ ಅರೆಆರಗಾ ಊರಿನ ನಡುವೆ ಮಸೀದಿ ಹತ್ತಿರ ಏಕಾಏಕಿ ದೇವರಗುಡಿ ನಿವಾಸಿಗಳಾದ ಸಂಪತ್,ಬಿನ್ ಉಮೇಶ್ಗೌಡ, ಆದರ್ಶ ಬಿನ್ ಪಟ್ಟಪ್ಪಗೌಡ ಮತ್ತು ಅವರ ಜೊತೆ ಇಬ್ಬರು ನನಗೆ ಅವರ ಪರಿಚಯ ಇರುವುದಿಲ್ಲ. ಇವರುಗಳು ನಮ್ಮನ್ನು ಅಡ್ಡಗಟ್ಟಿ ನನ್ನ ಗಂಡ ದೇವೆಂದ್ರರವರಿಗೆ ಮುಖ, ಸೊಂಟ, ಕಾಲುಗಳಿಗೆ ಹಲ್ಲೆ ಮಾಡಿ ರಕ್ತ ಗಾಯ ಮಾಡಿರುತ್ತಾರೆ.
ಬಿಡಿಸಲು ಹೋದ ನನ್ನನ್ನು ಕೈ ಹಿಡಿದು ಎಳೆದು ನಾಲ್ಕು ಜನಸೇರಿ ಪಕ್ಕದ ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ನನ್ನ ಉಡುಪನ್ನು ಬಲವಂತವಾಗಿ ಕಿತ್ತುಹಾಕಿ ಬೆತ್ತಲೆ ಗೊಳಿಸಿದ್ದಾರೆ ನನ್ನ ಗಂಡನಿಗೆ ವಿಪರೀತ ಐಟು ಬಿದ್ದಿದ್ದರಿಂದ ಅವರು ರಸ್ತೆ ಬದಿ ಎಚ್ಚರ ತಪ್ಪಿ ಬಿದ್ದಿದ್ದರಿಂದ ನನ್ನ ರಕ್ಷಣೆಗೆ ಬರಲು ಸಾದ್ಯವಾಗಲಿಲ್ಲ.
ನಾನು ಜೋರಾಗಿ ಕೂಗಿ ಕೊಂಡಾಗ ಸದರಿ ಸಂಪತ್, ಆದರ್ಶ. ಇನ್ನು ಒಬ್ಬರು ನನ್ನ ಅಂಗಾಂಗಗಳಿಗೆ ಅಸಭ್ಯವಾಗಿ ಸ್ಪರ್ಷಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿರುತ್ತಾರೆ, ಪುನಃ ನಾನು ಕಿರುಚಿ ಕೊಂಡಾಗ ನನ್ನ ಗಂಡ ಎಚ್ಚರಗೊಂಡು ನನ್ನ ಹೆಂಡತಿಗೆ ಅತ್ಯಚಾರ ಮಾಡುತ್ತಾರೆ, ಯಾರಾದರೂ ಬನ್ನಿ ರಕ್ಷಿಸಿ ಅಂತ ಕೂಗಿ ಕೊಂಡಾಗ ಈ ವ್ಯಕ್ತಿಗಳು ನನ್ನನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಈ ದಿನ ಉಳಿದುಕೊಂಡೆ ನಿನ್ನನ್ನು ಅತ್ಯಾಚಾರ ಮಾಡದೆ ಬಿಡುವುದಿಲ್ಲ. ಅಂತ ಬೆದರಿಕೆ ಹಾಕಿ ಹೋಗಿರುತ್ತಾರೆ.
ಜೀವ ಭಯದಿಂದ ತತ್ತರಿಸಿ ಹೋಗಿದ್ದ ನಮ್ಮನ್ನು ಸ್ಥಳಿಯರಾದ ಚಂದ್ರ, ದಿನೇಶ ಇವರುಗಳು ರಕ್ಷಣೆ ಮಾಡಿ, ರಿಕ್ಷಾದಲ್ಲಿ ಮನೆಗೆ ಕಳುಹಿಸಿ ಕೊಟ್ಟಿರುತ್ತಾರೆ. ನನ್ನ ಒಳ ಉಡುಪು, ಚೂಡಿದಾರದ ಪ್ಯಾಂಟ್ ಸ್ಥಳದಲ್ಲಿ ಕಳಚಿ ಬಿದ್ದಿದ್ದು ನಾನು ಮಾನ ರಕ್ಷಣೆಗಾಗಿ ವೇಲನ್ನು ಅಡ್ಡ ಉಟ್ಟುಕೊಂಡು ಮನೆಗೆ ಬಂದಿರುತ್ತೇನೆ, ನಮಗಾದ ಅವಮಾನ ಮತ್ತು ಹಲ್ಲೆಯಿಂದ ದೈಹಿಕ ಮಾನಸಿಕ ಹಿಂಸೆಗೆ ಒಳಗಾಗಿ ಆ ದಿನ ರಾತ್ರಿ ಮನೆಯಲ್ಲೇ ಕಳೆದು ದಿನಾಂಕ 10-05-2022 ರಂದು ತೀರ್ಥಹಳ್ಳಿ ಜಿ.ಸಿ.ಅಸ್ಪತ್ರೆಗೆ ನಮ್ಮನ್ನು ಸಂಬಂಧಿಗಳು ದಾಖಲು ಮಾಡಿರುತ್ತಾರೆ. ಗಂಡ ಹೆಂಡತಿ ನಾವಿಬ್ಬರು, ಚಿಕಿತ್ಸೆ ಪಡೆದು ಈ ದಿನ ಈ ದೂರನ್ನು ಲಿಖಿತವಾಗಿ ನೀಡುತ್ತಿದ್ದೇನೆ.
ನನ್ನನ್ನು ಮೇಲ್ಕಂಡ ವ್ಯಕ್ತಿಗಳು ಎಳೆದುಕೊಂಡು ಹೋಗುವಾಗ ನನ್ನ ಎಡ ಭಾಗದ ತೊಡೆಯು ತರಚಿ ರಕ್ತ ಗಾಯವಾಗಿರುತ್ತದೆ. ನಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಪರಿಶಿಷ್ಟರಾದ ನಮಗೆ ಸೂಕ್ತ ರಕ್ಷಣೆ ನೀಡಿ ಮೇಲ್ಕಂಡ ದೌರ್ಜನ್ಯ ನಡೆಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿ ಪ್ರಾರ್ಥನೆ ಎಂದು ಸಂತ್ರಸ್ಥ ಮಹಿಳೆ ನ್ಯಾಯಕ್ಕಾಗಿ ಅಲವತ್ತುಕೊಂಡಿದ್ದಾಳೆ.
ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಸಚಿವರ ಸಾಮ್ರಾಜ್ಯದಲ್ಲಿಯೇ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ನಡೆಯುವ ಹಂತಕ್ಕೆ ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ತೀರ್ಥಹಳ್ಳಿ ಜನತೆ ಮಾತನಾಡಿ ಕೊಳ್ಳುತ್ತಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇