ರಾಜ್ಯ ರಾಜಕಾರಣ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಮಹತ್ವದ ಬೆಳವಣಿಗೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇವತ್ತು ದಿಢೀರ್ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಅವರು ದೆಹಲಿಗೆ ವಿಮಾನ ಹತ್ತಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟ ಪುನರ್ ರಚನೆಯ ವೇಳೆ ಗೃಹ ಸಚಿವರ ಕುರ್ಚಿ ಅಲುಗಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಸಂಪುಟ ಪುನರಚನೆ ಮಾಡಲು ಒಪ್ಪಿಗೆ ಸಿಕ್ಕಿದ್ದೆ ಆದಲ್ಲಿ ಕೆಲವು ಸಚಿವರ ಸ್ಥಾನಪಲ್ಲಟ ಅಥವಾ ಸಂಪುಟದಿಂದಲೇ ಕೈಬಿಡುವ ಸಾಧ್ಯತೆಗಳಿವೆ. ಸಂಪುಟದ ಸ್ಥಾನಪಲ್ಲಟದ ಲಿಸ್ಟ್‌ನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರರಿದ್ದಾರೆಯೇ..? ಎಂಬ ಪ್ರಶ್ನೆ ಮೂಡಿದೆ. ಕಾರಣ ಬೊಮ್ಮಾಯಿ ಬೆನ್ನಲೇ ಜ್ಞಾನೇಂದ್ರ ಸಹ ದೆಹಲಿಗೆ ಹೋಗಿದ್ದಾರೆ.
ವಯಸ್ಸಿನ ಕಾರಣದಿಂದಾಗಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಬಿಜೆಪಿ ಹೈ ಕಮಾಂಡ್ ಇಳಿಸಿದರು. ಈ ವೇಳೆ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪರ ಕೃಪೆಯಿಂದ ಮುಖ್ಯಮಂತ್ರಿಯ ಗಾದಿಯನ್ನು ಏರಿದರು. ಮುಖ್ಯಮಂತ್ರಿಯವರು ತನ್ನ ಸಚಿವರನ್ನು ಆಯ್ಕೆ ಮಾಡುವ ಬೆರಳೆಣಿಕೆಯ ಸಚಿವರನ್ನು ಹೊರತುಪಡಿಸಿ ಬಹುತೇಕ ಯಡಿಯೂರಪ್ಪರ ಸಂಪುಟವನ್ನೇ ಮುಂದುವರೆಸಿದರು. ಈ ವೇಳೆ ಆರ್‌ಎಸ್‌ಎಸ್ ನ ಜೊತೆ ಒಡನಾಟವನ್ನು ಹೊಂದಿದ್ದ ಆರಗ ಜ್ಞಾನೇಂದ್ರರವರಿಗೆ ಖಡಕ್ ಖಾತೆಯಾದ ಗೃಹಮಂತ್ರಿಯಾಗುವ ಅವಕಾಶ ಒಲಿದು ಬಂತು.
ಸದಾ ಹಸನ್ಮುಖಿಯಾಗಿರುವ ಗೃಹಸಚಿವರು ಇಲಾಖೆಯ ಬಗ್ಗೆ ಮಾಹಿತಿಯನ್ನು ತಿಳಿದು ಹಿಡಿತ ಸಾಧಿಸಲು ಹಲವಾರು ತಿಂಗಳುಗಳೇ ಬೇಕಾಯ್ತು. ಇದರ ನಡುವೆ ಗೃಹ ಸಚಿವರ ಹೇಳಿಕೆಗಳು ಮತ್ತು ಆಡಳಿತವೈಕರಿ ವಿಪಕ್ಷಗಳ ಟೀಕೆಗೆ ಮತ್ತು ಆಡಳಿತ ವೈಫಲ್ಯದಿಂದಾಗಿ ಗೃಹ ಸಚಿವರ ಸ್ಥಾನಪಲ್ಲಟದ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಪ್ರಾರಂಭವಾಗಿದೆ.