ರಿಪ್ಪನ್‌ಪೇಟೆ ಸಂಜೀವಿನಿ ಒಕ್ಕೂಟದಿಂದ “ಮಾಸಿಕ ಸಂತೆ” : ಸ್ವಸಹಾಯ ಸಂಘದವರು ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮೇಳ

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯ ಸಂತೆ ಮೈದಾನದಲ್ಲಿ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನ ನಡೆಯಿತು.ಪಟ್ಟಣದ ಗ್ರಾಪಂ ವ್ಯಾಪ್ತಿಯ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು. ಆಹಾರ ಉತ್ಪನ್ನಗಳು, ಕರಕುಶಲ ವಸ್ತುಗಳು ಲಭ್ಯವಿದ್ದವು. 

ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಅವರು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,  ಜಿಲ್ಲಾ ಪಂಚಾಯತ್ ಶಿವಮೊಗ್ಗ , ತಾಲ್ಲೂಕ್ ಪಂಚಾಯತ್ ಹೊಸನಗರ ಮತ್ತು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಿಪ್ಪನ್ ಪೇಟೆಯಲ್ಲಿ  ‘ಮಾಸಿಕ ಸಂತೆ’ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.


ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಆರ್ಥಿಕ ನೆರವು ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಈ ಸಂತೆಯನ್ನು ಆಯೋಜಿಸಲಾಗುತ್ತಿದೆ.

ಈ ಸಂಧರ್ಭದಲ್ಲಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಮನೋಹರ್ ಸಂಜೀವಿನಿ ಮಾಸಿಕ ಸಂತೆಯಲ್ಲಿ ವಿವಿಧ ಸ್ವ ಸಹಾಯ ಒಕ್ಕೂಟದ ಮಹಿಳೆಯರು ತಯಾರಿಸಿದ ವಿವಿಧ ಖಾದ್ಯ, ಗುಡಿ ಕೈಗಾರಿಕೆ, ಕರ ಕುಶಲ ವಸ್ತುಗಳು ಅಲಂಕಾರಿ ವಸ್ತುಗಳ ನೇರ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಿಂಗಳಿಗೊಮ್ಮೆ ವಾರದ ಸಂತೆಯಲ್ಲಿ ಇದೇ ಸ್ಥಳದಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಹಣಕಾಸಿನ ಸೌಲಭ್ಯ ಪಡೆದುಕೊಂಡ ಸ್ವ ಸಹಾಯ ಸಂಘದವರು ತಯಾರಿಸಿದ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಅಮೆಜಾನ್‌, ಪ್ಲಿಪ್‌ಕಾರ್ಟ್‌ ಮೂಲಕ ಆನ್‌ಲೈನ್‌ ಮಾರಾಟ ವ್ಯವಸ್ಥೆಗೆ ಸರ್ಕಾರ ಯೋಜಿಸಿದೆ. ಈ ಕ್ರಮದಿಂದ ಗ್ರಾಮೀಣ ಮಹಿಳೆಯರು ತಯಾರಿಸಿ ವಸ್ತುಗಳನ್ನು ಆನ್‌ಲೈನ್‌ ಖರೀದಿಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ ಎಂದರು.

ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನದ ಬಗ್ಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಮಮತಾ ಸುಧೀಂದ್ರ ಪೂಜಾರಿ ಮಾತನಾಡಿ ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ. ಅದರಂತೆ ರಿಪ್ಪನ್ ಪೇಟೆಯಲ್ಲಿ ಆಯೋಜಿಸಲಾಗಿದೆ.ಇದರಿಂದ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ವಿಪುಲವಾದ ಅವಕಾಶಗಳಿವೆ ಎಂದರು.

>ಈ ಸಂಧರ್ಭದಲ್ಲಿ ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕರಾದ ಸುಧೀರ್,ಒಕ್ಕೂಟದ ಕಾರ್ಯದರ್ಶಿ ಶೋಭಾ,ಖಜಾಂಚಿ ರಶ್ಮಿ ಹಾಗೂ ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳಾದ ಸಿಂಧೂ,ಅಶ್ವಿನಿ, ಬಿಂದು ಮತ್ತು ಅರಸಾಳು ವಿನಾಯಕ ಸ್ವಸಹಾಯ ಸಂಘದ ಯಶೋಧ ,ಸೀತಮ್ಮ ಸೇರಿದಂತೆ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *