ಕೋಡೂರು ಬಳಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು,ಇನ್ನೊಬ್ಬನ ಸ್ಥಿತಿ ಗಂಭೀರ

ರಿಪ್ಪನ್‌ಪೇಟೆ: ಕೋಡೂರಿನ ಮಂದಾರ ಹೋಟೆಲ್ ಎದುರುಗಡೆ ಇಂದು ಮಧ್ಯಾಹ್ನ 03 ಗಂಟೆ ಸುಮಾರಿಗೆ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ‌.

ಮೃತನನ್ನು ಹೆಚ್ ಕುನ್ನೂರು ನಿವಾಸಿ ಶೇಷಪ್ಪ ಎಂದು ಗುರುತಿಸಲಾಗಿದೆ. ಕೋಡೂರಿನಿಂದ ಹೊಸನಗರ ಕಡೆ ಹೋಗುವಾಗ ಮಂದಾರ ಹೋಟೆಲ್ ಬಳಿ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದ ಇಬ್ಬರು ಸವಾರರಿದ್ದ ಪಲ್ಸರ್ ಬೈಕ್ ಗುದ್ದಿದ ಪರಿಣಾಮ ಸೂಪರ್ ಎಕ್ಸ್ಎಲ್ ಬೈಕ್ ನಲ್ಲಿ ತೆರಳುತ್ತಿದ್ದ ಶೇಷಪ್ಪನ ತಲೆಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


ಗಾಯಾಳುಗಳನ್ನು ಕೆಂಚನಾಲ ನಿವಾಸಿಗಳೆಂದು ತಿಳಿದು ಬಂದಿದ್ದು ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಹೊಸನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್ : ಆಕ್ರೋಶ

ಈ ಘಟನೆ ನಡೆದು ಅರ್ಧ ಗಂಟೆ ಕಳೆದರು ಹೊಸನಗರ ಮತ್ತು ರಿಪ್ಪನ್‌ಪೇಟೆ ಆ್ಯಂಬುಲೆನ್ಸ್ ಗಳು ಸಕಾಲದಲ್ಲಿ ಸಿಗದಿದಕ್ಕೆ ಸಾರ್ವಜನಿಕರು ಹಾಗೂ ಮೃತನ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಹ ನಡೆದಿದ್ದು ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಂದಿದ್ದರೆ ಬದುಕುತ್ತಿದ್ದಾರೇನೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವಾರದೊಳಗೆ ಒಂದೇ ಮನೆಯಲ್ಲಿ ಎರಡು ದುರ್ಘಟನೆ :

ಕಳೆದ ವಾರವಷ್ಟೆ ಮೂರು ದಿನಗಳಿಂದ ಕಾಣೆಯಾಗಿದ್ದ ಹೆಚ್ ಕುನ್ನೂರು ನಿವಾಸಿ ಧರ್ಮಪ್ಪ ನಿಟ್ಟೂರು ಸಮೀಪದ ಹೊಳೆಯಲ್ಲಿ ಜು.20 ರಂದು ಶವವಾಗಿ ಪತ್ತೆಯಾಗಿದ್ದರು. ಮೃತ ಧರ್ಮಪ್ಪನ ಅಣ್ಣ ಶೇಷಪ್ಪ ಇಂದು ಕೋಡೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು ವಾರ ಕಳೆಯುವ ಹೊತ್ತಿಗೆ ಒಂದೇ ಮನೆಯಲ್ಲಿ ಎರಡು ದುರ್ಘಟನೆ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *