ಸಾಗರ : ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಗತಿಗೆ ಹಾಜರಾಗದೆ ಬಿಎಡ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ತನಿಖೆ ನಡೆಸುವಂತೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಥಮ ಸೆಮಿಸ್ಟರ್ ನಲ್ಲಿ 37, 2ನೇ ವರ್ಷದಲ್ಲಿ 27 ವಿದ್ಯಾರ್ಥಿಗಳು ಬಿಎಡ್ ತರಗತಿಗೆ ಹಾಜರಾಗದೆ ಪರೀಕ್ಷೆ ಬರೆದಿದ್ದು, ತನಿಖೆ ನಡೆಸುವಂತೆ ಪ್ರತಿಷ್ಠಾನದ ಕೋಶಾಧ್ಯಕ್ಷ ಕವಲಕೊಡು ವೆಂಕಟೇಶ್ ದೂರು ನೀಡಿದ್ದಾರೆ.
ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕೆಲವರು ಬಿಎಡ್ ತರಗತಿಗೆ ಹಾಜರಾಗಿರುವುದಾಗಿ ಹೇಳಿಕೊಂಡು ಪರೀಕ್ಷೆ ಬರೆದಿದ್ದಾರೆ. ಏಕಕಾಲದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಹಾಜರಾತಿ ಹೊಂದುವುದು ಕಾನೂನಿನ ಉಲ್ಲಂಘನೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಕೋರಲಾಗಿದೆ.