ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಿಂದಾಗಿ ತಿಳಿಗೊಂಡಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ ಗ್ರಾಮದ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಪ್ಪು ಬ್ಯಾನರ್ ಕಟ್ಟಲು ಕೆಲ ಯುವಕರು ಮುಂದಾದಾಗ ಕೆಲ ಯುವಕರು ಆಕ್ಷೇಪಿಸಿದ್ದಾರೆ.
ಕೆಂಚನಾಲ ವೃತ್ತದಲ್ಲಿ ಇದುವರೆಗೂ ಯಾವ ಬ್ಯಾನರ್ ಗಳನ್ನು ಹಬ್ಬದ ಸಂದರ್ಭದಲ್ಲಿಯೂ ಕಟ್ಟಿರಲಿಲ್ಲ. ಈ ಬಾರಿ ಗಣಪತಿ ಹಬ್ಬಕ್ಕೆ ನಾವು ಕಟ್ಟಿಲ್ಲ. ಹಾಗಾಗಿ ನೀವು ಕಟ್ಟಬೇಡಿ ಎಂದು ಯುವಕರ ಗುಂಪೊಂದು ಆಕ್ಷೇಪಿಸಿತ್ತು.
ಕೆಂಚನಾಳ ಗ್ರಾಮದಲ್ಲಿ ನಾಳೆ ಈದ್ ಮಿಲಾದ್ ಹಬ್ಬವಿದ್ದು ಈ ಸಂಬಂಧ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟಲು ಯುವಕರು ಮುಂದಾಗಿದ್ದರು. ನಂತರ ಗ್ರಾಮದ ಮುಖಂಡರೆಲ್ಲಾ ಸೇರಿ ತೀರ್ಮಾನಿಸಿದ ನಂತರ ವೃತ್ತದ ಬಳಿ ಕಟ್ಟಿದ ಟಿಪ್ಪು ಸುಲ್ತಾನ್ ಪ್ಲೆಕ್ಸ್ ತೆಗೆಯಲಾಗಿದೆ.ಪರಿಸ್ಥಿತಿ ತಿಳಿಯಾಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ್ ಕೋಳಿ ಮತ್ತು ಸಿಬ್ಬಂದಿಗಳು ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.